ಸಂವಿಧಾನವನ್ನು ಅವಮಾನಿಸಿರುವ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರನ್ನು ದೇಶದ್ರೋಹ ಆರೋಪದಡಿ ಗಡೀಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿ ಕಸಬಾ ರಜಸ್ವ ನಿರೀಕ್ಷಕ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಸಂಸದ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಿ ಅನಂತ್ಕುಮಾರ್ ಹೆಗಡೆ ತಮ್ಮ ಭಾಷಣದಲ್ಲಿ ದೇಶದ ಪರಮೋಚ್ಛ ಗ್ರಂಥವಾದ ಸಂವಿಧಾನವನ್ನು ಅವಮಾನಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸಿ ಗುಲಾಮಗಿರಿ ಹೇರುವಂತಹ ಮನುಧರ್ಮಶಾಸ್ತ್ರವನ್ನು ಜನರ ಮೇಲೆ ಹೇರಲು ಹೊರಟಿರುವುದು ಮಹಾದ್ರೋಹವಾಗಿದೆ. ದೇಶದ್ರೋಹದ ಮಾತುಗಳನ್ನು ಆಡಿ ಅಶಾಂತಿ ಸೃಷ್ಟಿ ಮಾಡುತ್ತಾ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಅನಂತ್ಕುಮಾರ್ ಹೆಗಡೆ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದರು. ಬಿಜೆಪಿ ಪರಿವರ್ತನಾ ರ್ಯಾಲಿಗೆ ಅವರನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ, ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಎಂ.ವೆಂಕಟೇಶ್, ಎಂ.ಲಕ್ಷ್ಮೀನಾರಾಯಣ, ಎನ್.ರವಿಕುಮಾರ್, ಟಿ.ಎ.ಚಲಪತಿ, ದೊಡ್ಡ ತಿರುಮಳಯ್ಯ, ಮುನಿಕೃಷ್ಣಪ್ಪ, ಲಕ್ಷ್ಮಣ್, ಮಟ್ಟಿ ನಾರಾಯಣಸ್ವಾಮಿ, ಶಶಿಕಲ ಹಾಜರಿದ್ದರು.
- Advertisement -
- Advertisement -
- Advertisement -
- Advertisement -