ಪ್ರತಿಯೊಂದು ಜಿಲ್ಲಾ ಹಾಗೂ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶೀಘ್ರದಲ್ಲೇ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಅವರು ಮಾತನಾಡಿದರು. ಹಿಂದೆ ರಾಜ್ಯದ ಆಸ್ಪತ್ರೆಗೆ ಔಷಧಿಗಳ ಖರೀದಿಗಾಗಿ ಬಜೆಟ್ನಲ್ಲಿ ಹಣ ಮೀಸಲಿಡುವಾಗ ಕೆಲವೆಡೆ ಹೆಚ್ಚು ಕೆಲವೆಡೆ ಕಮ್ಮಿಯಾಗುತ್ತಿತ್ತು. ಇದರಿಂದಾಗಿ ವೈದ್ಯರು ಔಷಧಿಗಳನ್ನು ಕೊಂಡು ತರಲು ಬರೆದುಕೊಡುತ್ತಿದ್ದರು. ಬಡರೋಗಿಗಳಿಗೆ ಅನಾನುಕೂಲವಾಗುವುದರಿಂದ ಈ ಸಮಸ್ಯೆ ನಿವಾರಿಸಲು ಮುಖ್ಯಮಂತ್ರಿಗಳು ಜನೌಷಧಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಕಾಲ ತೆರೆದಿರುವ ಔಷಧಿ ಮಳಿಗೆಯನ್ನು ತೆರೆಯಲು ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ನೊಂದಿಗೆ ಒಪ್ಪಂದವಾಗಿದ್ದು, ಮೂರು ತಿಂಗಳೊಳಗಾಗಿ ಕಾರ್ಯಾರಂಭವಾಗಲಿದೆ. ಜನರಿಕ್ ಔಷಧಿ ಮಳಿಗೆ ಮತ್ತು 24 ಗಂಟೆ ತೆರೆದಿರುವ ಔಷಧಿ ಮಳಿಗೆ ಪ್ರಾರಂಭಿಸುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಔಷಧಿಗಾಗಿ ಆಸ್ಪತ್ರೆಯಿಂದ ಹೊರಕ್ಕೆ ಹೋಗುವ ಪ್ರಮೇಯ ಬರದು ಎಂದು ಹೇಳಿದರು.
ರಾಜ್ಯದೆಲ್ಲೆಡೆ ಇರುವ ವೈದ್ಯರ ಕೊರತೆಯನ್ನು ನೀಗಿಸಲು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಆರು ತಿಂಗಳೊಳಗಾಗಿ ತಜ್ಞವೈದ್ಯರು, ವೈದ್ಯರು, ದಂತವೈದ್ಯರು, ನರ್ಸ್ ಮತ್ತು ಇತರೇ ಸಿಬ್ಬಂದಿಯ ನೇಮಕಾತಿ ನಡೆಯಲಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳು ಹಾಗೂ ತಾಂತ್ರಿಕ ಅಂಶಗಳನ್ನೂ ಹೆಚ್ಚಿಸಲಾಗುವುದು ಎಂದು ನುಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಯೊಂದು ವಾರ್ಡ್ಗೂ ಭೇಟಿ ನೀಡಿದ ಸಚಿವರು ರೋಗಿಗಳ ಸಮಸ್ಯೆಗಳನ್ನು ವಿಚಾರಿಸಿದರು. ಸೂಕ್ತ ಔಷಧ, ಚಿಕಿತ್ಸೆ ಸಿಗುತ್ತಿದೆಯೇ ಎಂದು ಕೇಳಿದರು. ವೈದ್ಯರು ಮತ್ತು ಔಷಧಿಗಳ ಕೊರತೆಯ ಬಗ್ಗೆ ಮಾಹಿತಿ ಪಡೆದರು.
ಹೋಗು ಹಿಂದಕ್ಕೆ
‘ಏನ್ ನಿನ್ ಸಮಾಚಾರ? ನೀನಿಲ್ಲೇ ಕೆಲಸ ಮಾಡುತ್ತಿದ್ದೀಯಾ? ಎಂದು ಸಂಸದ ಕೆ.ಎಚ್.ಮುನಿಯಪ್ಪ ಕೇಳಿದಾಗ, ‘ಟಿ.ಎಚ್.ಒ ಸರ್, ನಾನು, ತಾಲ್ಲೂಕು ವೈದ್ಯಾಧಿಕಾರಿ’ ಎಂದು ಡಾ.ಅನಿಲ್ ಕುಮಾರ್ ಸಮಜಾಯಿಶಿ ನೀಡಿದರು. ತಕ್ಷಣವೇ ಸಂಸದರು, ‘ಹೋಗ್ ಹಿಂದಕ್ಕೆ, ಅನವಶ್ಯಕವಾಗಿ ಉದ್ದುದ್ದಕ್ಕೆ ಬಂದು ನಿಂತುಕೊಳ್ತೀಯ, ಯಾರ್ರೀ ಡಾಕ್ಟ್ರು ಮುಂದೆ ಬನ್ರೀ, ಬಂದು ಈ ರೋಗಿಯ ಸಮಸ್ಯೆಯನ್ನು ತಿಳಿಸಿ’ ಎಂದು ಆರೋಗ್ಯ ಸಚಿವ ಖಾದರ್ ಸಮ್ಮುಖದಲ್ಲಿ ಗದರಿದರು.
ಆರೋಗ್ಯ ಸಚಿವ ಖಾದರ್ ಸಾರ್ವಜನಿಕ ಸರ್ಕಾರಿ ಆಸ್ಪತ್ರಗೆ ಭೇಟಿ ನೀಡಿದಾಗ, ಬಚ್ಚಹಳ್ಳಿಯ ಅನೀತಾ ಎಂಬ ರೋಗಿಯು ಟಿ.ಬಿ. ಖಾಯಿಲೆಯಿಂದ ನರಳುತ್ತಿದ್ದು, ‘ನಾವು ಬಡವರಿದ್ದೇವೆ, ತಾಯಿ ಇಲ್ಲಿ ಇದ್ದಾರೆ. ಪಕ್ಕದ ಮನೆಯ ಅಜ್ಜ ಊಟ ತಂದುಕೊಡುತ್ತಾರೆ. ಔಷಧಿಗಳನ್ನು ಹೊರಗಡೆ ಬರೆದುಕೊಡುತ್ತಾರೆ. ಕೊಳ್ಳಲು ಶಕ್ತಿಯಿಲ್ಲ’ ಎಂದು ಆರೋಗ್ಯ ಸಚಿವ ಖಾದರ್ ಅವರಿಗೆ ದೂರಿದರು. ಆರೋಗ್ಯ ಸಚಿವರು ಟಿ.ಬಿ. ಖಾಯಿಲೆ ಇರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಏಕೆ ಹೊರಗಡೆ ಔಷಧಿಗಳನ್ನು ಬರೆಯಲಾಗುತ್ತಿದೆ ಎಂದು ಪ್ರಶ್ನಿಸಿದಾಗ ಅಲ್ಲೇ ಇದ್ದ ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ಸಮರ್ಪಕವಾಗಿ ಉತ್ತರಿಸದಿದ್ದಾಗ ಸಂಸದ ಕೆ.ಎಚ್.ಮುನಿಯಪ್ಪ ತರಾಟೆಗೆ ತೆಗೆದುಕೊಂಡರು.
ಹಣ ವಾಪಸ್ ನೀಡಿ
ಸಂಸದ ಕೆ.ಎಚ್.ಮುನಿಯಪ್ಪ ಕರೆದ ತಕ್ಷಣ ಆಗಮಿಸಿದ ಡಾ.ತಿಮ್ಮೇಗೌಡ, ಈ ರೋಗಿಗೆ ಸೋಂಕು ತಗುಲಿದ್ದನ್ನು ಕಡಿಮೆ ಮಾಡಲೆಂದು ಕೆಲವು ಚುಚ್ಚುಮದ್ದನ್ನು ಹೊರಕ್ಕೆ ಬರೆದಿದ್ದೆವು. ಉಳಿದಂತೆ ಟಿ.ಬಿ.ಖಾಯಿಲೆಗೆ ಉಚಿತವಾಗಿ ಔಷಧಿ ಮತ್ತು ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, ‘ಏಕೆ ಬಡವರನ್ನು ಶೋಷಣೆ ಮಾಡುತ್ತೀರಿ. ಔಷಧಿ ಇಲ್ಲದಿದ್ದರೆ ಏನು ಮಾಡಬೇಕೆಂದು ನಾವು ಹೇಳಿಕೊಡಬೇಕೆ? ರೋಗಿಯ ಬಳಿ ಔಷಧಿ ಬಿಲ್ ಪಡೆದು ಹಣ ಕೊಡಿ’ ಎಂದು ವೈದ್ಯರಿಗೆ ತಾಕೀತು ಮಾಡಿದರು. ಔಷಧಿಯ ಬಿಲ್ ತಂದು ವೈದ್ಯರಿಗೆ ನೀಡಿ ಹಣ ಪಡೆಯಿರಿ ಎಂದು ಟಿ.ಬಿ. ಖಾಯಿಲೆ ಪೀಡಿತ ರೋಗಿ ಅನೀತಾಗೆ ಸೂಚಿಸಿದರು.
ನಿಮ್ಮ ಮನೆಯನ್ನು ಹೀಗೇ ಇಟ್ಟುಕೊಳ್ತೀರಾ?
ಆರೋಗ್ಯ ಸಚಿವ ಖಾದರ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ, ಅಸ್ವಚ್ಛತೆಯ ಕಂಡು ತಾಲ್ಲೂಕು ವೈದ್ಯಾಧಿಕಾರಿಗಳನ್ನು, ‘ಏನ್ರೀ, ಹೀಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಮುಖ್ಯ. ನಿಮ್ಮ ಮನೆಯನ್ನು ಹೀಗೇ ಇಟ್ಟುಕೊಳ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು. ‘ಎಷ್ಟು ಶುಚಿಗೊಳಿಸಿದರೂ, ಜನರು ಎಲೆ ಅಡಿಕೆ ಮುಂತಾದವುಗಳನ್ನು ಉಗಿದು ಗಲೀಜು ಮಾಡುತ್ತಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ‘ಜನರಿಗೂ ಅರಿವು ಮೂಡಿಸಬೇಕಾದುದು ನಮ್ಮ ಜವಾಬ್ದಾರಿ’ ಎಂದರು ಸಚಿವರು.
ಆಸ್ಪತ್ರೆಯ ವಾರ್ಡ್ನಲ್ಲಿರುವ ಶೌಚಾಲಯಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಖಾದರ್,‘ಇದು ಸದಾ ಹೀಗಿರುತ್ತದೆಯೋ, ಅಥವಾ ಈ ದಿನ ಮಾತ್ರ ಹೀಗೆ ಶುಚಿಯಾಗಿದೆಯೋ?’ ಎಂದು ನಗುತ್ತಾ ಪ್ರಶ್ನಿಸಿದರು.
ದಿಂಬಿಲ್ಲದೆ ನೀವು ಮಲಗ್ತೀರಾ?
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳನ್ನು ಮಾತನಾಡಿಸಿದ ಆರೋಗ್ಯ ಸಚಿವ ಖಾದರ್, ‘ಔಷಧಿ, ಚಿಕಿತ್ಸೆ ಸರಿಯಾಗಿ ನೀಡುತ್ತಿದ್ದಾರೆಯೇ? ರಗ್ಗು ಬೆಡ್ಶೀಟ್ ಬದಲಿಸುತ್ತಾರೆಯೇ?’ ಎಂದು ವಿಚಾರಿಸಿದರು. ದಿಂಬುಗಳಿಲ್ಲದ್ದನ್ನು ಗಮನಿಸಿದ ಸಚಿವರು ‘ಏಕೆ ತಲೆ ದಿಂಬನ್ನು ಕೊಟ್ಟಿಲ್ಲ?’ ಎಂದು ವೈದ್ಯಾಧಿಕಾರಿಗಳನ್ನು ಕೇಳಿದರು. ‘ಅನುದಾನ ಬಂದಿದೆ ಸರ್. ಶೀಘ್ರವಾಗಿ ತರಿಸುತ್ತೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ಉತ್ತರಿಸಿದಾಗ ‘ದಿಂಬಿಲ್ಲದೆ ನೀವು ಮಲಗ್ತೀರಾ? ಬೇಗ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು. ನವಜಾತ ಶಿಶುಗಳು ಮತ್ತು ಬಾಣಂತಿಗಳಿರುವ ವಾರ್ಡ್ಗೆ ತೆರಳಿ ಅವರಿಗೆ ಮಡಿಲು ಕಿಟ್ ನೀಡಿದೆಯಾ ಎಂದು ವಿಚಾರಿಸಿದರು. ‘ಇಲ್ಲಿ ನಾವು ಹೆಚ್ಚು ಹೊತ್ತು ಇರಬಾರದು. ಮಕ್ಕಳು ಮತ್ತು ಬಾಣಂತಿಯರಿಗೆ ಸೋಂಕು ತಗುಲುತ್ತದೆ’ ಎಂದು ಹೇಳಿ ಸಂಸದ ಕೆ.ಎಚ್.ಮುನಿಯಪ್ಪ ಎಲ್ಲರನ್ನೂ ವಾರ್ಡ್ನಿಂದ ಹೊರಕ್ಕೆ ಕರೆದೊಯ್ದರು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಪುರಸಭಾ ಸದಸ್ಯರಾದ ಬಾಲಕೃಷ್ಣ, ಅಫ್ಸರ್ಪಾಷ, ಸಿಕಂದರ್, ಕೇಶವಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
[images cols=”six” lightbox=”true”]
[image link=”2175″ image=”2175″]
[image link=”2174″ image=”2174″]
[image link=”2172″ image=”2172″]
[image link=”2171″ image=”2171″]
[image link=”2170″ image=”2170″]
[image link=”2169″ image=”2169″]
[/images]
- Advertisement -
- Advertisement -
- Advertisement -
- Advertisement -