ಗೊಲ್ಲ ಸಮುದಾಯದ ಕಾಡುಗೊಲ್ಲ, ಹಟ್ಟಿಗೊಲ್ಲ ಉಪ ಪಂಗಡಗಳನ್ನು ಮಾತ್ರ ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡಿ ಇತರೆ ಉಪಪಂಗಡಗಳನ್ನು ಕೈಬಿಟ್ಟಲ್ಲಿ ಅನ್ಯಾಯವಾಗುವುದರಿಂದ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ತಾಲ್ಲೂಕು ಯಾದವ ಸಂಘದ ಸದಸ್ಯರು ಶಿರಸ್ತೆದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಗೊಲ್ಲ ಜನಾಂಗದ ಕಾಡುಗೊಲ್ಲರು, ಹಟ್ಟಿಗೊಲ್ಲರು ಎಂಬ ಉಪ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ತರುತ್ತಿದ್ದಾರೆ. ರಾಜ್ಯದ ಎಲ್ಲಾ 29 ಜಿಲ್ಲೆಗಳಲ್ಲಿಯೂ ಗೊಲ್ಲ ಜನಾಂಗದ ಸಮುದಾಯ ಹರಡಿದೆ. ಅವರುಗಳನ್ನು ಗೊಲ್ಲ, ಯಾದವ್, ಯಾದವ, ಆಸ್ಥಾನಗೊಲ್ಲ, ಅಡವಿಗೊಲ್ಲ, ಗೋಪಾಲ, ಗೋಪಾಲಿ, ಗೌಳಿ, ಗಾವ್ಳಿ, ಗಾವಳಿ, ಗಾವ್ಲಿ, ಅನುಬರು, ಅಟನಬರು, ಹಣಬರ್, ಕಾವಡಿ, ಕೊಲಯನ್, ಕೊನಾರ್, ಕೊನ್ನೂರ್, ಕೃಷ್ಣಗೌಳಿ, ಕೃಷ್ಣಗೊಲ್ಲ, ಮಣಿಯಾನಿ ಮುಂತಾದ ಉಪಪಂಗಡಗಲ ಹೆಸರುಗಳಿಂದ ಕರೆಯಲ್ಪಡುತ್ತಾರೆ.
ಅವರ ಮೂಲ ವೃತ್ತಿ ಪಶುಪಾಲನೆ, ಹೈನುಗಾರಿಕೆ, ಕುರಿಸಾಕಾಣಿಕೆ ಹಾಗೂ ಕೃಷಿಯಾಗಿದೆ. ಈ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿಯೂಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು 40 ರಿಂದ 45 ಲಕ್ಷದಷ್ಟು ಜನಸಂಖ್ಯೆಯಿದ್ದು, ಜನಾಂಗದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು. ರಾಜ್ಯದ ಸಮಸ್ತ ಗೊಲ್ಲ ಸಮುದಾಯ ಹಾಗೂ ಅದರ ಉಪಜಾತಿ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆಗೊಳಿಸಲು ಸಚಿವ ಸಂಪುಟದಲ್ಲಿ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಯೋಗಾನಂದ, ಪ್ರಧಾನ ಕಾರ್ಯದರ್ಶಿ ಜಿ.ರಾಮಚಂದ್ರಪ್ಪ, ಜಂಟಿ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -