ಕನ್ನಡ ಸಾಹಿತ್ಯ, ಪರಂಪರೆ, ಸಂಸ್ಕೃತಿ, ಆಹಾರ, ಜನಜೀವ, ಜಾನಪದ ಮೊದಲಾದವುಗಳ ಬಗ್ಗೆ ಪ್ರತಿಯೊಬ್ಬರ ಮನದಲ್ಲೂ ಅಭಿಮಾನವಿರಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಪುರಬೈರನಹಳ್ಳಿಯಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣವಾಗಿ 60 ವರ್ಷಗಳು ಆಗಿವೆ. ಈ ಸಂದರ್ಭದಲ್ಲಿ ಈ ಚಳುವಳಿಯಲ್ಲಿ ಭಾಗವಹಿಸಿದ್ದ ಮಹನೀಯರ ಹೋರಾಟವನ್ನು ನೆನೆಯಬೇಕಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಹಲವಾರು ನಾನಾ ರೀತಿಯ ಎಡರು ತೊಡರುಗಳನ್ನು ಅನುಭವಿಸಿದ್ದರು. ಕರುನಾಡಿನ ಹುಟ್ಟಿನ ಹಿಂದೆ ದಿಟ್ಟ ಹೋರಾಟದ ಕಥೆಯಿದೆ. ನಮಗಿದು ಬಿಟ್ಟಿ ಬಂದ ನಾಡಲ್ಲ. ಇದಕ್ಕಾಗಿ ಅನ್ನ, ನೀರು, ನಿದ್ದೆಯನ್ನು ಬಿಟ್ಟು ಹೋರಾಡಿದ ಹಿರಿಯರು ಹಲವರು. ಅವರೆಲ್ಲರ ತ್ಯಾಗದ ಉಡುಗೊರೆಯಾಗಿ ನಮಗೆ ಈ ನಾಡು ದಕ್ಕಿದೆ. ನಮ್ಮ ತಾಯ್ನೆಲವನ್ನು ಪ್ರತಿಯೊಬ್ಬರೂ ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.
ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಕನ್ನಡ ಕವಿಗಳ ಗೀತೆಗಳನ್ನು ಹಾಡಿದರು.
ಕಸಾಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಶಿಕ್ಷಕರಾದ ಕೃಷ್ಣಮೂರ್ತಿ ವಡ್ಡಾರ, ವಿ.ಆನಂದ್, ಸಿ.ರಾಘವೇಂದ್ರರೆಡ್ಡಿ, ವೆಂಕಟರಮಣಪ್ಪ, ಜಿಗ್ನುಮಾ, ಡಿ.ಕೆ.ಜಗದೀಶ್, ಎಸ್.ಟಿ.ರಾಜಪ್ಪ, ಮಂಜುನಾಥ, ಪಿ.ಪುಷ್ಪ, ಎ.ಲಾವಣ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -