ಸಾಲಕ್ಕಾಗಿ ದಾಖಲೆಗಳನ್ನು ಕೊಡಿಸಿಕೊಂಡು ವರ್ಷ ಕಳೆದರೂ ಇದುವರೆಗೂ ಸಾಲ ನೀಡಿಲ್ಲ ಎಂದು ಆರೋಪಿಸಿ ಆನೆಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ರೈತರು ಡಿಸಿಸಿ ಬ್ಯಾಂಕ್ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.
ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ)ನ ಶಾಖಾ ಕಚೇರಿಗೆ ಹಸಿರು ಸೇನೆ ರೈತ ಸಂಘದ ಮುಖಂಡರೊಂದಿಗೆ ಆಗಮಿಸಿದ ಆನೆಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯ ರೈತರು, ಕೂಡಲೆ ನಮಗೆ ಸಾಲ ನೀಡುವಂತೆ ಒತ್ತಾಯಿಸಿದರು.
ಕಳೆದ ವರ್ಷ ಕೃಷಿ ಸಾಲಕ್ಕಾಗಿ ಅರ್ಜಿಗಳನ್ನು ಹಾಕಿಕೊಂಡ ನಾವು ಪಹಣಿ, ಮುಟೇಷನ್, ಭಾವಚಿತ್ರಗಳು, ಬ್ಯಾಂಕ್ಗಳ ಎನ್ಒಸಿ ಇನ್ನಿತರೆ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದೇವೆ. ಪಹಣಿಯನ್ನು ಅಡವಿಟ್ಟಿದ್ದು ನಮ್ಮ ಎಲ್ಲ ಪಹಣಿಗಳಲ್ಲೂ ಬ್ಯಾಂಕ್ಗೆ ಆಧಾರ ಇಡಲಾಗಿದೆ ಎಂದು ನಮೂದಿಸಿಯೂ ಆಗಿದೆ. ಆದರೆ ಸಾಲ ಮಾತ್ರ ನೀಡಿಲ್ಲ, ಕಳೆದ ಏಳೆಂಟು ತಿಂಗಳುಗಳಿಂದಲೂ ಸಾಲ ನೀಡದೆ ಸತಾಯಿಸುತ್ತಿದ್ದಾರೆ. ಈ ಪಹಣಿಯನ್ನು ಇಟ್ಟುಕೊಂಡು ಬೇರೆ ಕಡೆ ಸಾಲವನ್ನೂ ಪಡೆಯುವಂತಿಲ್ಲ. ಈ ಬ್ಯಾಂಕಿನವರೂ ಸಾಲ ನೀಡುತ್ತಿಲ್ಲ.
ಇದೀಗ ಮುಂಗಾರು ಮಳೆ ಆರಂಭವಾಗಿದ್ದು ಹೊಲ ಗದ್ದೆಗಳನ್ನು ಉತ್ತಿ ಬಿತ್ತುವ ಸಮಯ. ಇದೀಗ ಜಮೀನನ್ನು ಉಳುಮೆ ಮಾಡಲು ಆರಂಭಿಸಿದಾಗಿನಿಂದಲೂ ಬೆಳೆ ಬಿತ್ತುವ ತನಕ ಗೊಬ್ಬರ, ರಾಸಾಯನಿಕ, ಬಿತ್ತನೆ ಬೀಜ ಇನ್ನಿತರೆ ಎಲ್ಲ ಹಂತಗಳಲ್ಲೂ ಬಂಡವಾಳ ಹಾಕಬೇಕಾಗುತ್ತದೆ. ಆದರೆ ಈ ಬ್ಯಾಂಕಿನವರು ಸಾಲ ನೀಡದೆ ಸತಾಯಿಸುತ್ತಿದ್ದಾರೆ. ಒಂದು ಒಂದೂವರೆ ತಿಂಗಳು ಕಳೆದರೆ ಬಿತ್ತನೆ ಅವಧಿಯೆ ಮುಗಿಯಲಿದೆ. ಇವರು ಇನ್ನು ಸಾಲ ಕೊಡುವುದು ಯಾವಾಗ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕೃಷಿಕರು ಬಡ್ಡಿಗೆ ಸಿಲುಕಬಾರದು ಎಂಬ ಉದ್ದೇಶದಿಂದ ಸಹಕಾರಿ ಬ್ಯಾಂಕ್ಗಳ ಮೂಲಕ ಸಾಲ ನೀಡುವ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಈ ಬ್ಯಾಂಕಿನವರು ಮಾಡುವ ಕೆಲಸದಿಂದ ನಾವು ಇನ್ನಷ್ಟು ಸಾಲ, ಬಡ್ಡಿಗೆ ಸಿಲುಕಿ ಸಾಯುವಂತಾಗಿದೆ ಎಂದು ಆರೋಪಿಸಿದರು.
ನಾವು ಕಳೆದ ಸಾಲಿನಲ್ಲಿಯೆ ಬ್ಯಾಂಕಿನಿಂದ ಸಾಲ ಸಿಗುತ್ತದೆ ಎಂಬ ನಂಬಿಕೆಯಿಂದ ಹಲವರ ಬಳಿ ಬಡ್ಡಿಗೆ ಹಾಗೂ ಕೈ ಸಾಲ ಪಡೆದಿದ್ದೇವೆ. ಅದು ಇದೀಗ ಬೆಟ್ಟದಂತೆ ಬೆಳೆದು ನಿಂತಿದೆ. ಈಗಲಾದರೂ ನೀವು ಸಾಲ ನೀಡದಿದ್ದರೆ ನಮಗೆ ಆತ್ಮಹತ್ಯೆಯೊಂದೆ ದಾರಿ ಎಂದು ತಮ್ಮ ಅಳಲು ತೋಡಿಕೊಂಡರು.
ಬ್ಯಾಂಕ್ನ ವ್ಯವಸ್ಥಾಪಕ ಲಿಂಗರಾಜು ಹಾಗೂ ಬ್ಯಾಂಕ್ನ ನಿರ್ದೆಶಕ ಪಿ.ಶಿವಾರೆಡ್ಡಿಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪಿ.ಶಿವಾರೆಡ್ಡಿ ಈ ತಿಂಗಳ ಅಂತ್ಯದೊಳಗೆ ಆನೆಮಡಗು ರೈತರ ಸೇವಾ ಕೇಂದ್ರದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲ ಸದಸ್ಯರಿಗೂ ಸಾಲ ನೀಡುವ ಭರವಸೆ ನೀಡಿದರು.
ರೈತ ಸಂಘದ ಅಧ್ಯಕ್ಷ ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಬಾಲಮುರಳಿ, ಆನೆಮಡಗು ಶಿವಣ್ಣ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.
- Advertisement -
- Advertisement -
- Advertisement -
- Advertisement -