ಸರ್ಕಾರ ನೀಡುವ ಸಹಾಯಧನ ದುರುಪಯೋಗವಾಗಬಾರದು ಮತ್ತು ನೇರವಾಗಿ ಗ್ರಾಹಕರಿಗೇ ತಲುಪಬೇಕು ಎಂದು ನೇರ ನಗದು (ಡಿ.ಬಿ.ಟಿ.ಎಲ್) ಯೋಜನೆಯನ್ನು ಜಾರಿಗೊಳಿಸಿದೆ ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಮಂಗಳವಾರ ನೇರ ನಗದು (ಡಿ.ಬಿ.ಟಿ.ಎಲ್) ಯೋಜನೆಯ ಬಗ್ಗೆ ಇಂಡೇನ್ ಗ್ಯಾಸ್ ಏಜನ್ಸೀಸ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 16,458 ಅನಿಲ ಸಿಲಿಂಡರ್ ಗ್ರಾಹಕರಿದ್ದು, 9 ಸಾವಿರ ಗ್ರಾಹಕರು ಮಾತ್ರ ಇದುವರೆಗೂ ಡಿ.ಬಿ.ಟಿ.ಎಲ್ ಯೋಜನೆಯ ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ಯೋಜನೆಗೆ ಒಳಪಡಬೇಕು. ಈ ಯೋಜನೆಯು ಪಾರದರ್ಶಕವಾದುದು. ಗೃಹ ಬಳಕೆ ಅನಿಲ ಸಿಲಿಂಡರ್ ಸಹಾಯಧನ ಪಡೆಯುವ ಪರಿಷ್ಕೃತವಾದ ಈ ಪದ್ಧತಿಯು ಪ್ರಾರಂಭವಾದ ಮೇಲೆ ಗ್ರಾಹಕರು ಮಾರುಕಟ್ಟೆ ದರವನ್ನೇ ಪಾವತಿಸಿ ಸಿಲಿಂಡರ್ ಪಡೆಯಬೇಕು. ಸಹಾಯಧನವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಪದ್ಧತಿಯಿಂದ ಸಬ್ಸಿಡಿ ಸಿಲಿಂಡರುಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುವುದು ನಿಲ್ಲುತ್ತದೆ. ಈ ತಕ್ಷಣಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗೂ ಆಧಾರ್ ಕಾರ್ಡ್ ಆದರಿಸಿಯೇ ನಡೆಯುವುದರಿಂದ ಎಲ್ಲರೂ ವಿಳಂಬ ಮಾಡದೆ ಆಧಾರ್ ಕಾರ್ಡ್ದಾರರಾಗಬೇಕು ಎಂದು ಹೇಳಿದರು.
ಆಧಾರ್ ಕಾರ್ಡ್ ನೋಂದಣಿ ಪಟ್ಟಣ ಪ್ರದೇಶದಲ್ಲಿ ಈಗ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಹಾಗೂ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಲಾಗುತ್ತದೆ. ಡಿ.ಬಿ.ಟಿ.ಎಲ್ ಯೋಜನೆಗೆ ಒಳಪಡಲು ಸಿಲಿಂಡರ್ ಗ್ರಾಹಕರು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಿಲಿಂಡರ್ ಖರೀದಿಯ ರಸೀದಿ, ಆಧಾರ್ ಗುರುತಿನ ಚೀಟಿಯ ಪ್ರತಿ(ಕಡ್ಡಾಯವಲ್ಲ) ನೀಡಬೇಕು ಎಂದು ವಿವರಿಸಿದರು.
ಆಹಾರ ಶಿರಸ್ತೆದಾರ ಪರಶಿವಮೂರ್ತಿ, ಶ್ರೀಧರ್, ಪ್ರಕಾಶ್, ಭಕ್ತರಹಳ್ಳಿ ಬೈರೇಗೌಡ, ಇಂಡೇನ್ ಗ್ಯಾಸ್ ಏಜನ್ಸಿ ಮಾಲೀಕ ನಾಗರಾಜ್, ಡಾ.ವೆಂಕಟೇಶಮೂರ್ತಿ, ಗೋಪಿನಾಥ್, ಮುರಳಿ, ಅಣ್ಣಯ್ಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -