ರಸ್ತೆಯಿಂದ ಎರಡು ಇಕ್ಕೆಲುಗಳಲ್ಲಿ ೫೦ ಅಡಿಗಳ ಅಗಲಕ್ಕೆ ಗುರುತು ಮಾಡಿ, ರಸ್ತೆಯಲ್ಲಿ ಒತ್ತುವರಿಯಾಗಿ ನಿರ್ಮಾಣವಾಗಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ನಗರಾಭಿವೃದ್ಧಿ ಯೋಜನಾಧಿಕಾರಿ ನಾಗರಾಜಶೆಟ್ಟಿ ಅವರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ನಗರಕ್ಕೆ ಶುಕ್ರವಾರ ಬೇಟಿ ನೀಡಿದ್ದ ಅವರು ನಗರೋತ್ಥಾನದಡಿಯಲ್ಲಿ ಮಾಡಿರುವ ರಸ್ತೆ ಡಾಂಬರು ಕಾಮಗಾರಿಗಳು ಮತ್ತು ರಸ್ತೆ ಅಗಲೀಕರಣ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಗರದ ಅಂಚೆ ಕಚೇರಿ ರಸ್ತೆ, ಉಲ್ಲೂರು ಪೇಟೆಯ ಬಳಿ ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸಿದ್ದಾರ್ಥನಗರದ ಪೂಜಮ್ಮ ದೇವಾಲಯದ ರಸ್ತೆ, ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿದ ಅವರು, ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಅಂಚೆ ಕಚೇರಿಯ ಬಳಿಯಲ್ಲಿ ಕಸವನ್ನು ವಿಲೇವಾರಿ ಮಾಡದೆ ಇರುವುದರಿಂದ ರಾಶಿಯಾಗಿ ಬಿದ್ದಿದ್ದ ಕಸವನ್ನು ಕಂಡ ಅವರು ಸಂಜೆಯೊಳಗೆ ಕಸವನ್ನು ವಿಲೇವಾರಿ ಮಾಡಿ, ನಿಮಗೆ ಸಂಬಳ ಕೊಡುವುದು ತಡವಾದರೆ ನೀವು ಸಮ್ನೆ ಇರ್ತೀರಾ ಎಂದು ನಗರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ದಿಬ್ಬೂರಹಳ್ಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಪರಿಶೀಲನೆ ನಡೆಸಿದ ಅವರು ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆಗಳಲ್ಲಿ ೫೦ ಅಡಿಗಳನ್ನು ಗುರ್ತಿಸಿ, ಗುರುತು ಮಾಡಿ, ಒತ್ತುವರಿಯಾಗಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ತಾಲ್ಲೂಕು ಕಚೇರಿಗೆ ಬೇಟಿ ನೀಡಿ, ಜೂನ್-೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಗೆ ನಡೆದಿರುವ ಸಿದ್ದತೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಕೆನರಾ ಬ್ಯಾಂಕಿನ ಸಮೀಪದಲ್ಲಿರುವ ನಗರಸಭಾ ಕಾರ್ಯಾಲಯ ನಿರ್ಮಾಣಕ್ಕೆ ಮೀಸಲಿಟ್ಟಿರುವ ನಗರಸಭೆಯ ಖಾಲಿ ನಿವೇಶನದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಕೆಳ ಹಂತಸ್ತಿನಲ್ಲಿ ಕಾರ್ಯಾಲಯ, ಮೇಲಂತಸ್ಥಿನಲ್ಲಿ ಸಭಾಂಗಣ ಸೇರಿದಂತೆ ಬೇರೆ ಕಚೇರಿಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನಾಗರಾಜಶೆಟ್ಟಿ, ಎಇಇ ನರಸಿಂಹರಾಜು, ಇಂಜಿನಿಯರ್ ಗಂಗಾಧರ, ಪ್ರಸಾದ್, ಬಾಲಚಂದ್ರ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -