ರಾಗಿ ತೂರುತ್ತಾ, ನೆಲ್ಲು ಕುಟ್ಟುತ್ತಾ, ಕಾಳುಗಳನ್ನು ಒಕ್ಕಣೆ ಮಾಡುತ್ತಾ, ಜನಪದ ಗೀತೆಗಳನ್ನು ಹಾಡುತ್ತಾ ಕಣ ಸಂಸ್ಕೃತಿಯನ್ನು ಮರುಸೃಷ್ಠಿ ಮಾಡಲಾಗಿತ್ತು.
ಪಟ್ಟಣದ ಹೊರವಲಯದ ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಗುರುವಾರ ನಡೆದ ಜನಾಂಗೀಯ ಸಂಸ್ಕೃತಿ ದಿನಾಚರಣೆಯ ಅಂಗವಾಗಿ ಗ್ರಾಮೀಣ ಜನಜೀವನ, ಜಾನಪದ, ಕೃಷಿ, ಆಚಾರ, ವಿಚಾರ, ವಿಜ್ಞಾನ, ತಂತ್ರಜ್ಞಾನ, ಪರಿಸರವನ್ನು ವಿದ್ಯಾರ್ಥಿಗಳು ಸೃಷ್ಠಿಸಿದ್ದರು. ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಧರಿಸಿ ಶಾಲೆಯನ್ನು ತಳಿರು ತೋರಣಗಳು ಮತ್ತು ಹೂಗಳಿಂದ ಅಲಂಕರಿಸಿದ್ದರು.
ಕಾಡು ಮನುಷ್ಯರು ಅವರ ಆಚರಣೆಗಳು, ಕಾಡಿನ ಪರಿಸರ, ವನ್ಯ ಜೀವಿಗಳು, ಉಳುವಾ ಯೋಗಿಯಂಥ ರೈತ, ಬಿತ್ತನೆ ಕಾರ್ಯ, ಪೈರು ನಾಟಿ, ಬೆಳೆದ ಪೈರು, ಕೊಯ್ಲು ಮಾಡಿ ಶೇಖರಣೆ, ನಂತರದ ಸುಗ್ಗಿ ನೃತ್ಯ, ಕಣದ ಏರ್ಪಾಡುಗಳು, ಧಾನ್ಯಗಳ ವಿಂಗಡಣೆ, ಶೇಖರಣೆ, ಸಂರಕ್ಷಣೆ, ವಿವಿಧ ಕಾಳು, ಬೇಳೆಗಳ ಮೊಳಕೆಗಳ ಆಹಾರ ಪದಾರ್ಥಗಳು, ಗುಡಿಸಲು, ಮಣ್ಣಿನ ಮನೆ, ಎತ್ತಿನ ಗಾಡಿ, ಹುತ್ತದಲ್ಲಿ ಹಾವು, ಅದರ ವೈರಿ ಮುಂಗುಸಿ, ಬದಲಿ ವಿದ್ಯುತ್ ಮೂಲಗಳಾದ ಗಾಳಿಯಂತ್ರ ಮತ್ತು ಸೋಲಾರ್, ಬ್ಯಾಂಕ್ ನಿರ್ವಹಣೆಯನ್ನು ಪ್ರತಿಬಿಂಬಿಸುವ ಪ್ರತಿಕೃತಿಗಳು, ಮೈಸೂರು ಅರಮನೆ, ವಿವಿಧ ದೇವಾಲಯಗಳು, ಆದಿಚುಂಚನಗಿರಿ ಕ್ಷೇತ್ರದ ಪ್ರತಿಕೃತಿ, ದೇವರ ರಥಗಳು, ಜಲಪಾತ, ಬಣ್ಣಬಣ್ಣದ ರಂಗೋಲಿಗಳು, ಪುರಾತನ ನಾಣ್ಯಗಳು ಮುಂತಾದ ಜನಾಂಗೀಯ ಬದುಕನ್ನು ಬಿಂಬಿಸುವ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು.
‘ನಮ್ಮ ದೇಶೀ ಸಂಸ್ಕೃತಿ, ಆಚಾರ ವಿಚಾರ, ಜನಜೀವನ, ಜಾನಪದ ಮುಂತಾದ ವಿಚಾರಗಳು ಮಕ್ಕಳ ಮನಸ್ಸಿಗೆ ತಲುಪಲು ಅವರೇ ಪರಕಾಯ ಪ್ರವೇಶಿಸಿದಂತೆ ಅನುಭವಿಸಿ ಪ್ರದರ್ಶಿಸುವ ಉದ್ದೇಶದಿಂದ ಜನಾಂಗೀಯ ಸಂಸ್ಕೃತಿ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶಿಕ್ಷಕರು ಕೂಡ ಮಕ್ಕಳೊಂದಿಗೆ ನಮ್ಮ ದೇಶೀ ಪದ್ಧತಿಯಲ್ಲೇ ಉಡುಗೆ ತೊಡುಗೆಗಳನ್ನು ಧರಿಸಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದೇವೆ. ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರ ಪ್ರತಿಭೆಯನ್ನು ಗುರುತಿಸಿ ಬಹುಮಾನಗಳನ್ನೂ ವಿತರಿಸಲಿದ್ದೇವೆ. ಅಳಗುಳಿಮನೆ, ಚೌಕಾಬಾರ, ಕಲ್ಲಾಟ ಮುಂತಾದ ಜಾನಪದ ಆಟಗಳು, ಸುಗ್ಗಿ ಹಾಡು, ಪೈರು ಹಾಡು ಮುಂತಾದ ಕೃಷಿ ಸಂಸ್ಕೃತಿಯ ಹಾಡುಗಳನ್ನು ಮಕ್ಕಳು ಪ್ರದರ್ಶಸುತ್ತಿರುವುದು ಸಂತಸ ತಂದಿದೆ’ ಎಂದು ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
- Advertisement -
- Advertisement -
- Advertisement -
- Advertisement -