ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿಯಲ್ಲಿ ಮಾಡಿರುವ ರಸ್ತೆ ಕಾಮಗಾರಿಗಳ ಮೇಲೆಯೆ ಪುನಃ ಕಾಮಗಾರಿಯನ್ನು ಮಾಡುವ ಮೂಲಕ ಶಾಸಕರ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಆರೋಪಿಸಿದ್ದಾರೆ.
ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ, ಕಳೆದ ಅವಧಿಯಲ್ಲಿ ನರೇಗಾ ಯೋಜನೆಯ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಡಿಯಲ್ಲಿ ಸುಮಾರು ೨ ಕಿ.ಮೀ. ದೂರಕ್ಕೆ ರಸ್ತೆಗೆ ಜಲ್ಲಿ ಕಲ್ಲುಗಳನ್ನು ಹಾಕಿ, ಮಣ್ಣು ಹೊಡೆದು ಸಮತಟ್ಟು ಮಾಡಲಾಗಿತ್ತು. ಈಗ ಶಾಸಕರ ಅನುದಾನದಲ್ಲಿ ಪುನಃ ಇದೇ ರಸ್ತೆಗೆ ಸ್ಥಳೀಯ ಗುತ್ತಿಗೆದಾರ ಬೇಕರಿ ನರಸಿಂಹಗೌಡ ಎಂಬುವವರು ಜಲ್ಲಿ ಹಾಕಿ ಮಣ್ಣು ಹೊಡೆದು ಹಣವನ್ನು ದುರುಪಯೋಗ ಮಾಡಲು ಹೊರಟಿದ್ದಾರೆ. ಗ್ರಾಮದಲ್ಲಿ ಸಿ.ಎಂ.ಜಿ.ಎಸ್.ವೈ.ಯೋಜನೆಯಡಿಯಲ್ಲಿ ೧.೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸ್ಥಳೀಯ ಗುತ್ತಿಗೆದಾರ ಬೇಕರಿ ನರಸಿಂಹಗೌಡ ಎಂಬುವವರು ಚರಂಡಿ ಕಾಮಗಾರಿಗಳನ್ನು ಮಾಡಿದ್ದು, ಕಾಮಗಾರಿ ಕಳಪೆಯಿಂದ ಕೂಡಿರುವುದರ ಜೊತೆಗೆ ಎರಡೂ ಕಡೆ ಮಾಡಿರುವ ಚರಂಡಿಗಳು ಒಂದೇ ಕಡೆಗೆ ಸೇರ್ಪಡೆಗೊಂಡಿರುವುದರಿಂದ ನೀರೆಲ್ಲವೂ ಮನೆಗಳಿಗೆ ನುಗ್ಗುತ್ತಿವೆ. ಗ್ರಾಮದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ, ಕುಡಿಯುವ ನೀರಿನ ಪೂರೈಕೆ ಮಾಡಲು ಕೊಳವೆಬಾವಿಯನ್ನು ಕೊರೆಯಿಸಿದ್ದು, ಅದಕ್ಕೆ ಹಳೆಯ ಪಂಪು ಮೋಟಾರು ಬಿಟ್ಟಿದ್ದಾರೆ. ೬ ಕೆ.ಜಿ.ತೂಕದ ಪೈಪ್ಲೈನ್ ಅಳವಡಿಸುವ ಬದಲಾಗಿ ೪ ಕೆ.ಜಿ.ತೂಕದ ಪೈಪ್ಲೈನ್ ಅಳವಡಿಸಿರುವುದರಿಂದ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಗ್ರಾಮದಲ್ಲಿನ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿಕೊಂಡು ಹರಿಯಲು ಜಾಗವಿಲ್ಲದ ಕಾರಣ, ದುರ್ವಾಸನೆ ಬೀರುವುದರ ಜೊತೆಗೆ ಹಲವಾರು ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡಾ ಶಾಸಕರು ಈ ಬಗ್ಗೆ ಪರಿಶೀಲನೆ ನಡೆಸಿಲ್ಲ, ಸ್ವಚ್ಚತೆಯ ಬಗ್ಗೆಯೂ ಗ್ರಾಮ ಪಂಚಾಯತಿ ಅಧ್ಯಕ್ಷರಾಗಲಿ ಗಮನಹರಿಸಿಲ್ಲವೆಂದು ಅವರು ಆರೋಪಿಸಿದರು.
ಗ್ರಾಮಸ್ಥರಾದ ಮುನಿರಾಜು, ಶಂಕರಪ್ಪ, ಕೃಷ್ಣಪ್ಪ, ನರಸಿಂಹಮೂರ್ತಿ, ಸಿದ್ದೇಗೌಡ, ಭೂಮಪ್ಪ, ಈರಪ್ಪ, ನಾರಾಯಣಸ್ವಾಮಿ, ಮುನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -