ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರದ ಅಗತ್ಯತೆ ಹೆಚ್ಚಿದೆ. ತಜ್ಞ ವೈದ್ಯರು ಗ್ರಾಮಕ್ಕೇ ಆಗಮಿಸಿ ಚಿಕಿತ್ಸೆ ನೀಡುವುದರಿಂದ ವೃದ್ಧರಿಗೆ, ಅಶಕ್ತರಿಗೆ, ಬಡವರಿಗೆ ಹಾಗೂ ಮಹಿಳೆಯರಿಗೆ ಉಪಯೋಗವಾಗುತ್ತದೆ ಎಂದು ಪೀಪಲ್ ಟ್ರೀ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಚಿಕ್ಕಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಮತ್ತು ಪೀಪಲ್ಸ್ ಟ್ರೀ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡಿನೋವು, ಕಣ್ಣಿನ ತೊಂದರೆ, ಗರ್ಭಗೋಶ ಹಾಗೂ ಸ್ತ್ರೀಸಂಬಂಧಿತ ತೊಂದರೆ, ಸೀಳುತುಟಿ, ಸೀಳು ಅಂಗಳ, ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲ್ಲೂಕಿನಲ್ಲಿ ವಿವಿದೆಡೆ ಈಗಾಗಲೇ ಎಸ್.ಎನ್.ಕ್ರಿಯಾ ಟ್ರಸ್ಟ್ ಜೊತೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿದ್ದೇವೆ. ದೇಶವಾರಪಲ್ಲಿ ಗ್ರಾಮದಲ್ಲಿ ಸೊಸೆ ಮತ್ತು ಅತ್ತೆ ಸೇರಿದಂತೆ 7 ಮಂದಿ ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಲಾಗಿದೆ. ದಡಂಘಟ್ಟದ ನವ್ಯಶ್ರೀ ಎಂಬಾಕೆಗೆ ಟ್ರಸ್ಟ್ ಸಹಾಯದಿಂದ 2 ಲಕ್ಷ ರೂಗಳ ವೆಚ್ಚದಲ್ಲಿ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದ ಪರಿಣಾಮ ತನ್ನ ಕಾಲಿನ ಶಕ್ತಿ ಪಡೆದಿದ್ದಾಳೆ. ಚಿಲಕಲನೇರ್ಪು ಹೋಬಳಿಯ ದೊಡ್ಡಬೆನ್ನರಘಟ್ಟದ ನರಸಿಂಹಮೂರ್ತಿ ಅವರನ್ನು ಕತ್ತಿನ ಹಿಂಭಾಗ ನರಸಮಸ್ಯೆಯಿಂದ ಮುಕ್ತಿ ನೀಡಲಾಗಿದೆ. ಮಳ್ಳೂರಿನ ಶ್ರೀನಿವಾಸ್ ಎಂಬುವರಿಗೆ ಥೈರಾಯ್ಡ್ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಸರ್ವರಿಗೂ ಆರೋಗ್ಯ ಮತ್ತು ಸರ್ವರಿಗೂ ಶಿಕ್ಷಣದ ಅಭಿಲಾಷೆಯೊಂದಿಗೆ ಆನೂರು ಎಸ್.ಎನ್.ಕ್ರಿಯಾ ಟ್ರಸ್ಟ್ ಮೂಲಕ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಯೋವೃದ್ಧರಿಗೆ ಪಿಂಚಣಿ ಸೌಲಭ್ಯ,ವಿಧವೆಯರಿಗೆ ಮಾಶಾಸನ, ಅಂಗವಿಕಲರಿಗೆ ಮಾಶಾಸನ ಹಾಗೂ ಪ್ರತಿಯೊಂದು ಹೋಬಳಿ ಮತ್ತು ಗ್ರಾಮ ಪಂಚಾಯಿತಿಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ವ್ಯವಸ್ಥಾಪಕ ಪಾರ್ಥ ಮಾತನಾಡಿ, ಈ ಶಿಬಿರದಲ್ಲಿ ಔಷಧಿಗಳನ್ನು ಮತ್ತು ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆ ಅವಶ್ಯಕತೆಯಿರುವ ರೋಗಿಗಳನ್ನು ಗುರುತಿಸಿ ಅವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಸಹಕಾರದಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಗ್ರಾಮದಿಂದ ಉಚಿತವಾಗಿ ಕರೆದೊಯ್ದು ಪುನಃ ಮನೆಗೆ ಕರೆತಂದು ಬಿಡುವುದಾಗಿ ಹೇಳಿದರು.
ಚಿಕಿತ್ಸೆ ಪಡೆದ ರೋಗಿಗಳಿಗೆ ಎಸ್.ಎನ್.ಕ್ರಿಯಾ ಟಸ್ಟ್ ವತಿಯಿಂದ ಸಸಿಗಳನ್ನು ವಿತರಿಸಲಾಯಿತು.
ಆನೂರು ಶ್ರೀನಿವಾಸ್, ದೇವರಾಜ್, ಚಂದ್ರೇಗೌಡ, ಶಿವಾನಂದ, ಅಮರ್, ಕೋಟಹಳ್ಳಿ ದೇವರಾಜ್, ಎ.ಆರ್. ಅಬ್ದುಲ್ ಅಜೀಜ್, ಹಿತ್ತಲಹಳ್ಳಿ ಸುರೇಶ್, ನಂದನಗೌಡ, ಶಿವಾನಂದ, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಛಲಪತಿ, ವಿಶ್ವನಾಥ, ಮುರಳಿ ಈ ಸಂದರ್ಭದಲ್ಲಿ ಹಾಜರಿದ್ದರು
- Advertisement -
- Advertisement -
- Advertisement -
- Advertisement -