ಅಸಮಾನತೆ, ಭ್ರಷ್ಟಾಚಾರ, ಭಯೋತ್ಪಾದನೆಗಳನ್ನು ನಿರ್ಮೂಲನೆ ಮಾಡಿ ರಾಷ್ಟದ ಪ್ರಗತಿಗೆ ಯುವಶಕ್ತಿ ಶ್ರಮಿಸಬೇಕು ಎಂದು ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಾಡಹಬ್ಬ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ದೇಶದ ಯುವಶಕ್ತಿ ವಿದ್ಯಾವಂತರಾಗಿ, ಸ್ನೇಹ-ಸೌರ್ಧತೆಯಿಂದ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ದೇಶಪ್ರೇಮವನ್ನು ಬೆಳೆಸಿಕೊಂಡು ದೇಶದ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಮನೋರಮ, ಭಾರತೀಯರ ಐಕ್ಯತೆಯ ಸಂಕೇತವಾಗಿ ಗಣರಾಜೋತ್ಸವವನ್ನು ಆಚರಿಸಲಾಗುತ್ತಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳಸಿಕೊಳ್ಳಬೇಕು. ಭಾರತವನ್ನು ಒಂದುಗೂಡಿಸಲು ಅನೇಕ ಮಹಾತ್ಮರು ಪ್ರಾಣತ್ಯಾಗ ಮಾಡಿದ್ದಾರೆ. ರಾಷ್ಟ್ರಕ್ಕೆ ಅಗೌರವವನ್ನು ತರುವಂತಹ ಯಾವುದೇ ರೀತಿಯ ಕೆಲಸವನ್ನು ಮಾಡಬಾರದು ಎಂದು ತಿಳಿಸಿದರು.
ಗಣರಾಜೋತ್ಸವ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಇಲಾಖೆ ಮತ್ತು ವಿವಿಧ ಶಾಲೆಗಳ ಮಕ್ಕಳು ಧ್ವಜವಂದನೆ ಹಾಗೂ ಪಥಸಂಚಲನ ನಡೆಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ನಗರದ ಕೋಟೆ ವೃತ್ತದಲ್ಲಿ ಯೂನಿಟಿ ಸಿಲ್ಸಿಲಾ ಫೌಂಡೇಶನ್ ವತಿಯಿಂದ ಗಣರಾಜೋತ್ಸವದ ಪ್ರಯುಕ್ತ ಪೆರೇಡ್ನಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಬಿಸ್ಕೆಟ್ ಮತ್ತು ಕುಡಿಯುವ ನೀರಿನ ಪ್ಯಾಕೆಟ್ ವಿತರಿಸಲಾಯಿತು.
ನಗರಸಭೆಯ ಪೌರಾಯುಕ್ತ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಗುರುರಾಜ್ ರಾವ್, ನಗರಸಭೆ ಸದಸ್ಯರಾದ ಅಫ್ಸರ್ಪಾಷ, ಸಿಕಂದರ್ ಮತ್ತಿತರರು ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -