ಈ ಭೂಮಿಯ ಮೇಲೆ ಮನುಷ್ಯ ಬದುಕಲು ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ಕಾನೂನಿನ ತಿಳುವಳಿಕೆ ಹಾಗೂ ಪಾಲನೆಯೂ ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಶೀಲಾ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಬಶೆಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರೂ ಕಾನೂನು ಅರಿತು ತಮ್ಮ ಇತಿಮಿತಿಯಲ್ಲಿ ನಡೆದುಕೊಂಡರೆ ಸುಖ, ಶಾಂತಿ, ನೆಮ್ಮದಿಯ ಬದುಕು ನಡೆಸಬಹುದು. ಆದ್ದರಿಂದಲೆ ಎಲ್ಲ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ಗೃಹಣಿಯರು, ವ್ಯಾಪಾರಸ್ಥರು, ಉದ್ಯೋಗಿಗಳುಮ ನೌಕರರು ಸೇರಿ ಎಲ್ಲ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ಕಾನೂನು ಸೇವಾ ಸಮಿತಿಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಇನ್ನೂ ಸಾಕಷ್ಟು ಮಂದಿಗೆ ತಿಳಿದಿಲ್ಲ. ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕಡ್ಡಾಯ ಶಿಕ್ಷಣದ ಹಕ್ಕು ಕುರಿತು ವಕೀಲರಾದ ಬಾಸ್ಕರ್ ಉಪನ್ಯಾಸ ನೀಡಿದರೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯ ಪೊಸ್ಕೋ ಕಾಯಿದೆ ಕುರಿತು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್ಐ ರಾಘವೇಂದ್ರ ಸವಿವರವಾಗಿ ವಿವರಿಸಿದರು.
ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಲಕ್ಷ್ಮಿ, ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಎಸ್ಐ ಪುರುಷೋತ್ತಮ್, ಸರ್ಕಾರಿ ವಕೀಲರಾದ ಈ.ಡಿ.ಶ್ರೀನಿವಾಸ್, ಎಸ್.ಕುಮುದಿನಿ, ವಕೀಲರಾದ ಟಿ.ವಿ.ಚಂದ್ರಶೇಖರ್, ಲೊಕೇಶ್, ಕೆ.ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -