ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮದ ಕೆಲ ಕಾಂಗ್ರೆಸ್ ಮುಖಂಡರು ನೀಡಿದ ಕಿರುಕುಳದಿಂದ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಇದೀಗ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಎಚ್.ಎಂ.ರಾಮಚಂದ್ರ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಜಗೂರು ಗ್ರಾಮದ ಸಾಮಾನ್ಯ ಮೀಸಲು ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಯಗಳಿಸಿದ್ದ ಎಚ್.ಎಂ.ರಾಮಚಂದ್ರರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿಸೆಂಬರ್ ೧೭ ರಂದು ನಡೆಯಲಿರುವ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದರು.
ಈ ಹಿಂದೆ ಹುಜುಗೂರು ಗ್ರಾಮದ ಸಾಮಾನ್ಯ ಮೀಸಲು ಸ್ಥಾನದಿಂದ ಜಯಗಳಿಸಿದ್ದ ನನಗೆ ಗ್ರಾಮದ ಕೆಲ ಕಾಂಗ್ರೆಸ್ ಮುಖಂಡರು ವಿನಾಕಾರಣ ಕಿರುಕುಳ ನೀಡುತ್ತಿದ್ದರು. ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ತಾವು ಹೇಳಿದಂತೆ ಕೆಲಸ ಮಾಡುವಂತೆ ನನ್ನ ಮೇಲೆ ಒತ್ತಡ ಹೇರಿದ ಕಾರಣ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೆ. ಇದೀಗ ಗ್ರಾಮದ ಜೆಡಿಎಸ್ ಮುಖಂಡರೂ ಸೇರಿದಂತೆ ಕಾರ್ಯಕರ್ತರು ನನ್ನ ಮನವೊಲಿಸಿ ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆಯಲ್ಲಿ ಮತ್ತೆ ನನ್ನನ್ನು ಸ್ಫರ್ದಿಸುವಂತೆ ಮಾಡಿದ್ದು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗಾಗಿ ಮುಂದಿನ ದಿನಗಳಲ್ಲಿ ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ಹಿರಿಯ ಮುಖಂಡ ಹುಜಗೂರು ರಾಮಯ್ಯ ಮಾತನಾಡಿ, ಕಳೆದ ಎರಡೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಹುಜುಗೂರು ಗ್ರಾಮದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಯಗಳಿಸಿದ್ದ ಎಚ್.ಎಂ.ರಾಮಚಂದ್ರ ಪಕ್ಷಭೇದ ಮರೆತು ಗ್ರಾಮದ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದರು. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಇಲ್ಲಸಲ್ಲದ ಒತ್ತಡ ಹೇರಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಯತ್ನ ನಡೆಸಿದರು. ಇದರಿಂದ ನೊಂದ ರಾಮಚಂದ್ರ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಚುನಾವಣೆ ಘೋಷಣೆಯಾಗಿದ್ದು ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ಸಕ್ರಿಯಾವಾಗಿ ಪಕ್ಷ ಭೇದ ಮರೆತು ದುಡಿದ ರಾಮಚಂದ್ರ ರವರೇ ಸದಸ್ಯರಾಗಿರಬೇಕು ಎಂಬ ಉದ್ದೇಶದಿಂದ ಗ್ರಾಮದ ಜೆಡಿಎಸ್ ಮುಖಂಡರೂ ಹಾಗೂ ಕಾರ್ಯಕರ್ತರು ಅವರ ಮನವೊಲಿಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೇವೆ ಎಂದರು.
ಇದಕ್ಕೂ ಮುನ್ನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರರ ಸ್ವಗೃಹದಲ್ಲಿ ಹುಜಗೂರು ಗ್ರಾಮದ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ರಾಮಚಂದ್ರ, ರಾಮಪ್ಪ, ಮುನಿಶಾಮಪ್ಪ, ಸುಬ್ರಮಣಿ, ಕದಿರಪ್ಪ, ಸ್ಕೂಲ್ ಮುನಿಶಾಮಪ್ಪ, ಬೊಮ್ಮಣ್ಣ, ಶಶಿಕುಮಾರ್, ಸುಬ್ರಮಣಿ, ಲೋಕೇಶ್, ಮಂಜುನಾಥ್, ಕೃಷ್ಣಪ್ಪ, ಸುಬ್ರಮಣಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರ, ಸದಸ್ಯರಾದ ಹುಜುಗೂರು ನಾರಾಯಣಸ್ವಾಮಿ, ಮುಖಂಡರಾದ ಹುಜಗೂರು ರಾಮಯ್ಯ, ಕದಿರಪ್ಪ, ಹಾಜರಿದ್ದರು.
- Advertisement -
- Advertisement -
- Advertisement -
- Advertisement -