ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕವಿ ಕಾವ್ಯದ ಸಂಗಮದಂತಿದ್ದ ಅಪರೂಪದ ಕಾವ್ಯ ಕಲರವ ನಡೆಯಿತು.
ಒಂದೆಡೆ ಹಿರಿಯ ಕವಿಗಳ ಪರಿಚಯ ಮಾಡಿಕೊಡುತ್ತಾ ಕವನಗಳನ್ನು ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು ಕವಿಗಳು ಓದುವಂತೆಯೇ ಕವನ ವಾಚಿಸಿದರೆ, ಮತ್ತೊಂದೆಡೆ ಶಾಲೆಯ ಪುಟ್ಟ ಕವಿಗಳು ಬರೆದಿರುವ ಕವನಗಳನ್ನು ಶಾಲೆಯ ಮುಖ್ಯ ಶಿಕ್ಷಕರು ವಾಚಿಸಿದರು.
ಕುವೆಂಪು ಅವರ ಗಗನಗುರು, ಬೇಂದ್ರೆಯವರ ಕವನ, ಡಾ.ಸಿದ್ದಲಿಂಗಯ್ಯ ಅವರ ನನ್ನ ಕವನ, ಬಿ.ಆರ್.ಲಕ್ಷ್ಮಣರಾವ್ ಅವರ ಮಾದರಿ, ಲಂಕೇಶ್ ಅವರ ಅವ್ವ, ಕೆ.ಎಸ್.ನರಸಿಂಹಸ್ವಾಮಿಯವರ ಇದುವೆ ನಮ್ಮ ಹಾಡು, ಕೆ.ಎಸ್.ನಿಸಾರ್ ಅಹಮದ್ ಅವರ ಹಾಡು ಕವಿಯೆ ಹಾಡು, ಪಂಜೆ ಮಂಗೇಶರಾಯರ ಹುತ್ತರಿ ಹಾಡು, ಪು.ತಿ.ನ ಅವರ ನನ್ನ ಹಾಡು, ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಕಷ್ಟ ಕವನಗಳನ್ನು ವಿದ್ಯಾರ್ಥಿಗಳಾದ ವರ್ಷ, ಅನುಷಾ, ಸ್ವಾತಿ, ಕಾವ್ಯ, ವಾಣಿಶ್ರೀ, ಚಂದ್ರಕಲಾ, ಶಿಲ್ಪ, ಅಮೃತಾ, ಅಂಜಲಿ, ಭವ್ಯ ವಾಚಿಸಿದರೆ, ವಿದ್ಯಾರ್ಥಿಗಳಾದ ರಾಜೇಶ, ನವೀನ, ಸಂತೋಷ, ಮೋಹನ್, ದಿಲೀಪ, ಅರವಿಂದ, ಶೇಖರ, ಮುರಳಿ, ಮುನಿಕೃಷ್ಣ ಕವಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತ, ವಂದನಾರ್ಪಣೆ ಹಾಗೂ ಅಧ್ಯಕ್ಷತೆಯನ್ನು ಕೂಡ ವಿದ್ಯಾರ್ಥಿಗಳೇ ವಹಿಸಿಕೊಂಡು ಕಾವ್ಯ ಕಲರವ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಅತಿಥಿಗಳಿಗೆ ಹಾಗೂ ಶಿಕ್ಷಕರಿಗೆ ತಾವೇ ತಯಾರಿಸಿದ ಹೂಗುಚ್ಛಗಳನ್ನು ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಐದನೇ ತರಗತಿಯ ವಿದ್ಯಾರ್ಥಿ ಡಿ.ಕೆ.ಕಿರಣ್ ಬರೆದ ಕವನ ’ನನ್ನ ಜೀವನದ ಕವನ’ ವನ್ನು ಶಾಲೆಯ ಮುಖ್ಯ ಶಿಕ್ಷಕ ಎಚ್.ಮುನಿಯಪ್ಪ ವಾಚಿಸಿದರು.
ಕವಿ ಪರಿಚಯ ಹಾಗೂ ಕವನವನ್ನು ವಾಚಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸ್ನೇಹ ಯುವಕ ಸಂಘದ ಸದಸ್ಯರು, ಶಿಕ್ಷಕ ಬಸವರಾಜ್ ಮತ್ತು ಹರೀಶ್ ವಿತರಿಸಿದರು.
ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಶಿಕ್ಷಕ ಬಸವರಾಜ್, ಕನ್ನಮಂಗಲದ ಸ್ನೇಹ ಯುವಕ ಸಂಘದ ಕಾರ್ಯದರ್ಶಿ ವಾಸುದೇವ್, ಶಿಕ್ಷಕರಾದ ಎಚ್.ಬಿ.ಮಂಜುನಾಥ್, ಕೆ.ಶಿವಶಂಕರ್, ಜೆ.ಶ್ರೀನಿವಾಸ, ಎಸ್.ಕಲಾಧರ್. ಟಿ.ಜೆ.ಸುನೀತಾ ಹಾಜರಿದ್ದರು.
- Advertisement -
- Advertisement -
- Advertisement -
- Advertisement -