ಮರದಿಂದ ಬಿದ್ದ ಬೀಜ, ಎದೆಯಲ್ಲಿ ನಾಟಿದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ಕನಿಷ್ಠ ಇಬ್ಬರಿಗಾದರೂ ಕಲಿಕೆಯನ್ನು ಕಲಿಸಿ. ಕಲಿತ ಋಣ ಕಲಿಸಿ ತೀರಿಸಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲ್ಲುಕಿನಾದ್ಯಂತ ಅನಕ್ಷರಸ್ಥರು 29,951 ಅನಕ್ಷರಸ್ಥರಿದ್ದಾರೆ. ಈ ವರ್ಷದ ಗುರಿ 16,841 ಇದೆ. 54 ಮಂದಿ ಪ್ರೇರಕರನ್ನು ನಿಯೋಜಿಸಿದ್ದು, 27 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಷರ ಕಲಿಸುವ ಜೊತೆಯಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ತಿಳಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ ಹಿಂದಿನ ಸ್ಲೇಟು ಬಳಪದ ಕಾಲದಿಂದ ಈಗಿನ ಕಂಪ್ಯೂಟರ್‌ವರೆಗೂ ಕಾಲದ ಪ್ರವಾಹ ಸಾಗಿದೆ. ಈಗಿನ ಜಗತ್ತಿನ ಬದಲಾವಣೆಯಲ್ಲಿ ಜೀವಿಸಲು ಅಕ್ಷರ ಜ್ಞಾನ ಅತ್ಯಗತ್ಯ. ಸಾಕ್ಷರತೆಯಿಂದಲೇ ಪ್ರಗತಿ ಸಾಧ್ಯ. ಕೇವಲ ಅಧಿಕಾರಿಗಳಷ್ಟೇ ಅಲ್ಲ, ಸಮುದಾಯದ ಭಾಗವಹಿಸುವಿಕೆಯೂ ಇದರಲ್ಲಿ ಮುಖ್ಯ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಲೀಲಾರಾಜಣ್ಣ, ಸತೀಶ್, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕರಾದ ಟಿ.ವಿ.ಶ್ರೀನಿವಾಸ್, ಜಿ.ಎನ್.ಕ್ಯಾತಪ್ಪ, ಸಂಪನ್ಮೂಲ ವ್ಯಕ್ತಿ ವಿ.ಕೃಷ್ಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -