ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕಸಾಪ ವತಿಯಿಂದ ನಡೆದ ‘ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಉತ್ತಮ ಪ್ರಶಸ್ತಿ ಪಡೆದ ತಾಲ್ಲೂಕಿನ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮ’ ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯ ಸಮಯದ ಹೆಚ್ಚಿನ ಅವಧಿಯನ್ನು ಶಾಲೆ ಮತ್ತು ಕಾಲೇಜಿನಲ್ಲಿಯೇ ಕಳೆಯುವುದರಿಂದ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಶಿಕ್ಷಕರು ತರಗತಿಯಲ್ಲಿ ಮಕ್ಕಳನ್ನು ಶಾಂತಿಯಿಂದ ಹಾಗೂ ಪಠ್ಯವಿಷಯಗಳಲ್ಲಿ ಆಸಕ್ತಿಯಿಂದ ಕಲಿಯುವಿಕೆಗೆ ಪ್ರೇರೇಪಿಸಬೇಕೆ ಹೊರತು ಅವರು ಸಾಕಪ್ಪಾ ಈ ಶಾಲೆಯ ಸಹವಾಸ ಎಂದು ತರಗತಿ ಬಿಟ್ಟು ಹೋಗುವಂತಿರಬಾರದು. ಶಿಕ್ಷಕರಾದವರ ಮೊದಲ ಕರ್ತವ್ಯವೇನೆಂದರೆ ವಿಷಯಗಳ ಬಗ್ಗೆ ಸೂಕ್ತಜ್ಞಾನವನ್ನು ಹೊಂದಿರಬೇಕು ಹಾಗೂ ತರಗತಿಯ ಅವಶ್ಯಕತೆಗೆ ಹಾಗೂ ಮಗುವಿನ ಆಸಕ್ತಿಗೆ ಪೂರಕವಾಗಿ ಶಿಕ್ಷಣವನ್ನು ನೀಡುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ 157 ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯನ್ನು ಅನುಭವಿಸುತ್ತಾ ಮುಚ್ಚುವ ಹಂತಕ್ಕೆ ಬಂದಿರುವ ಆಘಾತಕಾರಿ ವಿಷಯ ಒಂದೆಡೆಯಾದರೆ, ಮತ್ತೊಂದೆಡೆ ಐವರು ಶಿಕ್ಷಕರು ಈ ಬಾರಿ ಪ್ರಶಸ್ತಿಯನ್ನು ಪಡೆಯುವ ಮೂಲಕ ನಮಗೆಲ್ಲಾ ಹೆಮ್ಮೆಯನ್ನು ತಂದಿದ್ದಾರೆ. ಒಟ್ಟಾರೆ ಉತ್ತಮ ಶಿಕ್ಷಕರಿದ್ದಾರೆ, ಅವರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ನಾವೆಲ್ಲಾ ಪಣ ತೊಡೋಣ. ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಸರ್ಕಾರಿ ಶಾಲೆಗಳ ಅವಶ್ಯಕತೆಯಿದೆ. ಬಡವರು, ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಬೇಕೇ ಬೇಕು. ಎಲ್ಲರಿಗೂ ಶಿಕ್ಷಣ ದೊರಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್ ಮಾತನಾಡಿ, ಪ್ರಶಸ್ತಿಯನ್ನು ಈಗ ಆನ್‌ಲೈನ್ ಮೂಲಕ ಸಲ್ಲಿಸುವ ವ್ಯವಸ್ಥೆ ಮಾಡಿರುವುದರಿಂದ ಪಾರದರ್ಶಕವಾಗಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಪ್ರಶಸ್ತಿಗಳು ಉತ್ತೇಜನ ನೀಡುತ್ತವೆ. ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ನುಡಿದರು.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್, ವೈಜ್ಞಾನಿಕ ಕ್ಷೇತ್ರದಲ್ಲಿ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮ್ಮಗಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಎಚ್.ಜಿ.ಚಂದ್ರಕಲಾ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಟಿ.ವೆಂಕಟಾಪುರ ಶಾಲೆಯ ಶಿಕ್ಷಕ ಸಿ.ವೆಂಕಟರೆಡ್ಡಿ, ಮಳ್ಳೂರು ಶಾಲೆಯ ಎಂ.ಸೀನಪ್ಪ ಮತ್ತು ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಜಿ.ಎನ್.ಶಿವಣ್ಣ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಸತೀಶ್, ಚಾಂದ್‌ಪಾಷ, ಖಜಾಂಚಿ ಸುಧೀರ್, ಸುದರ್ಶನ್, ನರಸಿಂಹಮೂರ್ತಿ, ಚಿಕ್ಕಾಂಜಿನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ, ಸದಸ್ಯ ದೇವರಾಜ್, ಎಸ್.ವಿ.ನಾಗರಾಜರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಎಸ್‌ಡಿಎಂಸಿ ಅಧ್ಯಕ್ಷ ಮುನಿಆಂಜಿನಪ್ಪ, ಸ್ನೇಹ ಯುವಕರ ಸಂಘದ ಅಧ್ಯಕ್ಷ ಕೆ.ವಸಂತ ವಲ್ಲಭ ಕುಮಾರ್, ಕಾರ್ಯದರ್ಶಿ ವಾಸುದೇವ್, ಮುಖ್ಯ ಶಿಕ್ಷಕ ಚೌಡರೆಡ್ಡಿ, ಶಿಕ್ಷಕರಾದ ಜೆ.ಶ್ರೀನಿವಾಸ್, ಕೆ.ಎಸ್.ಶಿವಶಂಕರ್, ಎಸ್.ಕಲಾಧರ್, ಟಿ.ಜೆ.ಸುನೀತಾ, ಪದ್ಮಾವತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -