ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನ ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯಿಂದ ಅಮೆರಿಕೆಗೆ ತೆರಳಿ ಅಲ್ಲಿ ಮೊಳಗಿ ತನ್ನ ಶಬ್ಧ ಮಾಧುರ್ಯದಿಂದ ಅಲ್ಲಿನವರ ಮನಸೂರೆಗೊಂಡಿದೆ.
ಈಚೆಗೆ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್‌ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ವಾದಕ ಮುನಿವೆಂಕಟಪ್ಪ ಮತ್ತು ತಂಡದವರು ಭಾಗವಹಿಸಿದ್ದರು. ತಾಲ್ಲೂಕಿನ ತಮಟೆ, ತಾಸು, ಡೋಲು ಮತ್ತು ಡ್ರಮ್ ಅಮೆರಿಕೆಯಲ್ಲಿ ಮಾಡಿದ ಶಬ್ದಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕುಣಿದು ಕುಪ್ಪಳಿಸಿದ್ದಾರೆ. ತಮಟೆ ಬಾರಿಸುತ್ತಲೇ ಕಣ್ಣಿನ ರೆಪ್ಪೆಗಳಿಂದ ನೋಟನ್ನು ಮತ್ತು ಗುಂಡು ಸೂಜಿಯನ್ನು ಮೇಲೆತ್ತುವ ಮುನಿವೆಂಕಟಪ್ಪನವರ ಚಾಕಚಕ್ಯತೆಗೆ ಬೆಕ್ಕಸ ಬೆರಗಾಗಿದ್ದಾರೆ. ಅವರ ತಮಟೆಯ ಗಂಡು ದನಿಗೆ ಮಾರು ಹೋದ ಆಯೋಜಕರು ನಿಮ್ಮ ನೆನಪಿಗಾಗಿ ತಮಟೆಯನ್ನು ಕೊಡಿ ಎಂದು ಕೇಳಿ ಪಡೆದಿದ್ದಾರೆ.
ಪಿಂಡಿಪಾಪನಹಳ್ಳಿಯ ತಮಟೆ ವಾದಕ ನಾಡೋಜ ಮುನಿವೆಂಕಟಪ್ಪ ಅವರೊಂದಿಗೆ ಅವರ ಶಿಷ್ಯರಾದ ಮಧು, ಪ್ರಸನ್ನ, ದೇವರಮಳ್ಳೂರು ಮುನಿಯಪ್ಪ, ದ್ಯಾವಪ್ಪ, ವೆಂಕಟೇಶಪ್ಪ, ಶ್ರೀನಿವಾಸಪುರ ವೆಂಕಟೇಶ, ಕೋಲಾರ ಶ್ರೀನಿವಾಸಯ್ಯ ಅಮೆರಿಕೆಗೆ ಹೋಗಿ ಬಂದಿದ್ದಾರೆ.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಇಂಥ ನೆಲ ಸಂಸ್ಕೃತಿಯ ಕಲೆಯನ್ನು ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಪ್ರಶಸ್ತಿಗಳ ಸರಮಾಲೆಯೇ ಇವರ ಕೊರಳನ್ನು ಅಲಂಕರಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಇವರದು ಬಡಕುಟುಂಬ. ತಂದೆ ಪಾಪಣ್ಣ ತಾಯಿ ಮುನಿಗಂಗಮ್ಮ. ಬದಕಿನ ಆಸರೆಗಾಗಿ ತಂದೆಯಿಂದಲೇ ತಮಟೆ ವಾದನದ ಮೊದಲ ಪಾಠ. ನಾಲ್ಕನೇ ಕ್ಲಾಸಿಗೇನೆ ಕಲಿಕೆ ನಿಲ್ಲಿಸಿದ ಮುನಿವೆಂಕಟಪ್ಪ ‘ನಾಡೋಜ’ ಪ್ರಶಸ್ತಿಯವರೆಗೂ ಬೆಳೆದು ನಿಂತದ್ದು ಮಾತ್ರ ಅವರ ಏಕಲವ್ಯ ಸಾಧನೆಯ ಮಹಾನ್ ಯಾತ್ರೆ!
‘1992 ರಲ್ಲಿ ಜಪಾನ್‌ಗೆ ಸರ್ಕಾರ ಕಳುಹಿಸಿತ್ತು. ಅಲ್ಲಿ ಏಳು ದಿನಗಳ ಕಾಲದ ಕಾರ್ಯಕ್ರಮದಲ್ಲಿ ತಮಟೆಯ ನಾದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈಚೆಗೆ ಅಮೆರಿಕೆಗೆ ಹೋಗುವ ಅವಕಾಶ ಒದಗಿ ಬಂದಿತು. ಪಾಸ್‌ಪೋರ್ಟ್ ಕಳೆದು ಹೋಗಿತ್ತು. ಹೊಸದಾಗಿ ಪಾಸ್‌ಪೋರ್ಟ್ ಮಾಡಿಸಿ ವೀಸಾ ಮಾಡಿಸುವಷ್ಟರಲ್ಲಿ ಸಾಕುಸಾಕಾಯಿತು. ನನ್ನ ಮಗ, ತಮ್ಮನ ಮಗ ಮತ್ತು ಐದು ಮಂದಿ ಶಿಷ್ಯರೊಂದಿಗೆ ಅಮೆರಿಕೆಯ ಅಕ್ಕ ಸಮ್ಮೇಳನದಲ್ಲಿ ತಮಟೆ, ತಾಸು, ಡೋಲು ಮತ್ತು ಡ್ರಮ್ ಬಾರಿಸಿ ವಿವಿಧ ಚಮತ್ಕಾರಗಳನ್ನು ಪ್ರದರ್ಶಿಸಿದೆವು. ನಮ್ಮ ನಾದಕ್ಕೆ ಅಲ್ಲಿನವರು ಕುಣಿದು ಕುಪ್ಪಳಿಸಿದರು. ಅಲ್ಲಿನ ಗೋಲ್ಡನ್ ಬೇ ಸೇತುವೆ, ಬೀಚ್ ಮುಂತಾದ ಸ್ಥಳಗಳನ್ನು ತೋರಿಸಿ ಆತ್ಮೀಯವಾಗಿ ಉಪಚರಿಸಿದರು. ಕಾರ್ಯಕ್ರಮದ ಆಯೋಜಕರು ಆಸೆ ಪಟ್ಟು ಕೇಳಿದರೆಂದು ತಮಟೆ ಮತ್ತು ಕಡ್ಡಿಗಳನ್ನು ಕೊಟ್ಟು ಬಂದೆ’ ಎಂದು ಅಮೆರಿಕೆಯ ಅನುಭವವನ್ನು 67 ವರ್ಷದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.
- Advertisement -
- Advertisement -
- Advertisement -
- Advertisement -