ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯವನ್ನು ವೃದ್ಧಿಸುವುದು, ಜನರ ಅವಶ್ಯಕತೆಗಳನ್ನು ಮನಗಂಡು ಆಯಾ ಸೌಲಭ್ಯಗಳನ್ನು ಅವರಿಗೆ ತಲುಪಿಸುವುದು ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಹಾಗೂ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಪ್ರಗತಿಯ ವರದಿಯನ್ನು ಪಡೆದು ಅವರು ಮಾತನಾಡಿದರು.
ಶಿಕ್ಷಣ, ಅಂಗನವಾಡಿ, ನೀರನ್ನು ಸಂಗ್ರಹಿಸುವುದು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಹಣದ ಖರ್ಚಿಲ್ಲದೇ ಮಾಡಬಹುದಾದ 80 ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕಿದೆ. ಗ್ರಾಮ ಸಭೆ, ಸಾಮಾನ್ಯ ಸಭೆ, ಮಕ್ಕಳ ಸಭೆ, ಮಹಿಳಾ ಸಭೆ, ರೈತರ ಸಭೆ, ಕೆ.ಡಿ.ಪಿ ಸಭೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ, ಎಲ್ಲಾ ಇಲಾಖೆಗಳನ್ನು ಜೊತೆಗೂಡಿಸಿಕೊಂಡು ಸಮನ್ವಯತೆಯಿಂದ ಕೆಲಸಗಳನ್ನು ಮಾಡಬೇಕಿದೆ. ಸಮಗ್ರ ಅಭಿವೃದ್ಧಿಯತ್ತ ಚಿಂತನೆ ನಡೆಸಿದ್ದು, ಜಿಲ್ಲೆಯನ್ನು ಮಾದರಿಯಾಗಿ ರೂಪಿಸುವುದಾಗಿ ಹೇಳಿದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಎಲ್ಲರೂ ಜವಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ನರೇಗಾ ಯೋಜನೆಯ ಮೂಲ ಉದ್ದೇಶ ಗ್ರಾಮಾಭಿವೃದ್ದಿ ಜೊತೆಗೆ ಉದ್ಯೋಗ ಕಲ್ಪಿಸುವುದು, ಉದ್ಯೋಗ ಸೃಷ್ಟಿ ಮಾಡುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಯಾವುದೇ ಅಕ್ರಮ, ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವುದಿಲ್ಲ. ಅಧಿಕಾರಿಗಳ ವಿರುದ್ದ ಆರೋಪಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ವಚ್ಚ ಭಾರತ್ ಮಿಷನ್ ಅಭಿಯಾನದಲ್ಲಿ ಘನ ತ್ಯಾಜ್ಯ ವಿಲೆವಾರಿ ಘಟಕಗಳನ್ನು ನಿರ್ಮಾಣ ಮಾಡಲು ಈಗಾಗಲೇ 14 ಪಂಚಾಯಿತಿ ಗಳಲ್ಲಿ 89 ಎಕರೆ ಪ್ರದೇಶದಲ್ಲಿ ಸ್ಥಳ ಗುರ್ತಿಸಲಾಗಿದೆ. ಇನ್ನೂ ಉಳಿದ 14 ಪಂಚಾಯಿತಿಗಳಲ್ಲಿ ನಿವೇಶನಗಳ ಗುರ್ತಿಸಲು ಆಗಿಲ್ಲ. ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿ ಘಟಕಗಳನ್ನು ನಿರ್ಮಾಣ ಮಾಡಲಾಗುವುದೆಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಹಾಜರಿದ್ದರು.