ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಜಲದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನೀರಿನ ಅಭಾವವನ್ನು ತಡೆಯುವ ಕಡೆಗೆ ಗಮನ ಹರಿಸದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಕಷ್ಟವಾಗುತ್ತದೆ. ಈಗ ಲಭ್ಯವಿರುವ ಮಿತವಾದ ನೀರನ್ನು ಜಾಗರೂಕತೆಯಿಂದ ಬಳಸುವುದು ಮತ್ತು ಮಿತವ್ಯಯವಾಗ ಬಳಸುವುದನ್ನು ರೂಢಿಸಿಕೊಳ್ಳಬೇಕು. ನೀರಿನ ನಿರ್ವಹಣೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮಳೆನೀರು ಹರಿದು ಹೋಗದಂತೆ ತಡೆಯೊಡ್ಡಿ ನೆಲದಲ್ಲಿ ಇಂಗುವಂತೆ ಕ್ರಮಗಳನ್ನು ಅನುಸರಿಸಬೇಕು. ಮರುಪೂರಣ ಕ್ರಿಯೆಗಳಿಂದ ಅಂತರ್ಜಲಮಟ್ಟ ಹೆಚ್ಚಳವಾಗಿ ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯವಾಗುವುದು. ನೀರಿನ ಅಭಾವವನ್ನು ತಡೆಯುವಲ್ಲಿ ಸದ್ಯಕ್ಕೆ ಇರುವ ಮಾರ್ಗವೆಂದರೆ ನೀರಿನ ಮತ್ತು ಜಲಮೂಲಗಳ ಸಂರಕ್ಷಣೆ ಮಾತ್ರ ಎಂದು ಅವರು ತಿಳಿಸಿದರು.
ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿ, ಮಾನವನ ಎಲ್ಲಾ ಚಟುವಟಿಕೆಗಳಿಗೂ ನೀರು ಅಗತ್ಯವಾಗಿದ್ದು ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಯೋಜನೆಗಳನ್ನು ರೂಪಿಸಬೇಕು ಎಂದರು.
ವಿಶ್ವಜಲದಿನದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದ ಸಮೀಪದ ಚೆಕ್‌ಡ್ಯಾಂಗಳಿಗೆ ಭೇಟಿನೀಡಿ ಮಾಹಿತಿ ಪಡೆದರು. ಗ್ರಾಮದ ಬಳಿಯ ಇತಿಹಾಸ ಪ್ರಸಿದ್ಧ ಕುಂಟೆಗಳು, ಜಲಮೂಲಗಳ ಬಳಿ ಸ್ವಚ್ಚತಾ ಕಾರ್ಯ ಕೈಗೊಂಡರು. ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಫರ್ದೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಳೆನೀರಿನ ಸಂರಕ್ಷಣೆ ಕುರಿತ ಭಿತ್ತಿಪತ್ರಗಳನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್ ಹಾಜರಿದ್ದರು.