Kachahalli, Sidlaghatta : ತಾಲ್ಲೂಕಿನ ಕಾಚಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ “ವಿಶ್ವ ಗುಬ್ಬಿ ದಿನ”ವನ್ನು ಶಾಲೆಯ ಆವರಣದಲ್ಲಿ ಬೇಸಿಗೆ ಕಾಲದಲ್ಲಿ ಪಕ್ಷಿಗಳ ನೀರಿನ ದಾಹ ತೀರಿಸಲು ನೀರನ್ನು ಇಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಚಂದ್ರಶೇಖರ್, “ಪಶು-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು. ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತನಾಗಿದ್ದಾನೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ-ಪಕ್ಷಿ, ಗಿಡ, ಮರ, ಕಾಡುಗಳು ನಮಗೆ ಅತ್ಯಾವಶ್ಯಕವಾಗಿವೆ. ಭಾರತದ ಇತಿಹಾಸ ಪರಂಪರೆಯಲ್ಲಿ ಪ್ರಾಣಿ, ಪಕ್ಷಿ, ಮರಗಳು ಹಾಗೂ ನದಿಗಳನ್ನು ಪೂಜ್ಯನೀಯ ಮತ್ತು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ವಚ್ಚಂದವಾಗಿ ಆಕಾಶದಲ್ಲಿ ಚಿಲಿಪಿಲಿ ಗುಡುತ್ತ ಹಾರಾಡುವ ಹಕ್ಕಿಗಳನ್ನು ನಾವು ಕಾಣುತ್ತೇವೆ. ಪ್ರತಿಯೊಂದು ಪಕ್ಷಿಗಳಿಗೆ ತನ್ನದೇಯಾದ ವಿಶೇಷತೆಯಿದೆ, ನವೀಲನ್ನು ಪಕ್ಷಿಗಳ ಹಾಜ ಎಂದು ಕರೆದರೆ ಕಾಗೆಯನ್ನು ಅತಿಥಿ ಆಗಮನದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಂಸ ಪಕ್ಷಿಯು ದೈವಿಕ ಆತ್ಮಗಳಿಗೆ ಆಶ್ರಯವನ್ನು ನೀಡುವ ಪ್ರಕ್ಷಿ ಎನ್ನಲಾಗುತ್ತದೆ. ಗರುಡ ಪಕ್ಷಿಯನ್ನು ಪಕ್ಷಿಗಳ ರಾಜ ಎಂದು ಕರೆದರೆ, ಪಾರಿವಾಳವನ್ನು ಶಾಂತಿಯ ಸಂಕೇತವಾಗಿದೆ ಹೀಗೆ ವಿವಿಧ ಪಕ್ಷಿಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ” ಎಂದು ವಿವರಿಸಿದರು.
“ಮನುಷ್ಯರಾದ ನಾವುಗಳು ನಮಗೆ ನೀರಿನ ಸಮಸ್ಯೆಗಳಾದರೆ ಇತರರ ಮುಂದೆ ಹೇಳಿಕೊಳ್ಳುತ್ತೇವೆ. ಆದರೆ ಮಾತುಬಾರದ ಆ ಮೂಕ ಪ್ರಾಣಿ-ಪಕ್ಷಿಗಳು ಯಾರಿಗೆ ತಾನೆ ತಮ್ಮ ಯಾತನೆ ಹೇಳಬೇಕು. ಅವುಗಳ ಬಾಷೆ ನಮಗೆ ಅರ್ಥ ಆಗುವುದೆ? ಪ್ರಾಣಿ ಪ್ರಪಂಚದಲ್ಲಿಯೆ ಶ್ರೇಷ್ಠ ಪ್ರಾಣಿಯಾದ ಮಾನವ ಅವುಗಳ ರೋಧನವನ್ನು ಅರ್ಥಮಾಡಿಕೊಂಡು ಅವುಗಳಿಗೆ ನೀರುಣಿಸಬೇಕು. ಬೇಸಿಗೆ ಬಂತೆಂದರೆ ಸಾಕು, ಭೂಮಿಯಲ್ಲಿ ನೀರಿನಮಟ್ಟ ತಾನಾಗಿಯೆ ಕಡಿಮೆಯಾಗುತ್ತದೆ. ಇದರಿಂದ ಕೆರೆ, ಹಳ್ಳ, ಕೊಳ್ಳ, ಭಾವಿಗಳಲ್ಲಿಯೂ ನೀರು ಕಡಿಮೆಯಾಗಿ ನೀರಿನ ಹಾಹಾಕಾರ ಎಲ್ಲೆಡೆ ಕಂಡುಬರುವದನ್ನು ನಾವು ಕಾಣುತ್ತೆವೆ. ಪಶು, ಪ್ರಾಣಿ, ಪಕ್ಷಿಗಳು ಈ ಸಂದರ್ಭದಲ್ಲಿ ನೀರಿಗಾಗಿ ಪರಿತಪ್ಪಿಸುತ್ತಾ ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಲಾಯನ ಮಾಡುತ್ತವೆ” ಎಂದು ಮಕ್ಕಳಿಗೆ ತಿಳಿ ಹೇಳಿದರು.