Tippenahalli, Sidlaghatta : ನಾವು ನಮ್ಮ ದಿನ ನಿತ್ಯದ ಬದುಕನ್ನು ಮಣ್ಣಿನ ಪರಿಸರದಿಂದಲೆ ಆರಂಭಿಸುತ್ತೇವೆ. ಹಾಗಾಗಿ ಮಣ್ಣಿನ ಪರಿಸರವನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೂ ಕೊಡುಗೆಯಾಗಿ ನೀಡಬೇಕೆಂದು ತಿಪ್ಪೇನಹಳ್ಳಿಯ ಹಿರಿಯ ಕೃಷಿಕ ಟಿ.ಎನ್.ಮುನಿಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಜಿಕೆವಿಕೆ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ “ವಿಶ್ವ ಮಣ್ಣು ದಿನಾಚರಣೆ”ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಣ್ಣನ್ನು ಬಿಟ್ಟು ನಾವು ನಮ್ಮ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿ ನಾವು ಮಣ್ಣಿನ ಫಲವತ್ತತೆಯನ್ನು ನಾಶಪಡಿಸುತ್ತಿದ್ದೇವೆ. ಅದರ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗಾಗಿ ರೈತರಾದ ನಾವು ಮಣ್ಣಿನ ಫಲವತ್ತತೆಯನ್ನು ಉಳಿಸಿ ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಉತ್ತಮ ಬದುಕನ್ನು ಉಳಿಸುವ ಕೆಲಸಕ್ಕೆ ಇಂದಿನಿಂದಲೆ ಮುಂದಾಗಬೇಕೆಂದರು.
ಜಿಕೆವಿಕೆ ಮಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕ, ಯೋಜನೆಯ ಮುಖ್ಯಸ್ಥ ಡಾ.ಆರ್.ಕೃಷ್ಣಮೂರ್ತಿ ಮಾತನಾಡಿ, ಹೆಚ್ಚಿನ ಫಸಲಿಗೆ ಆಸೆ ಬಿದ್ದು ಮಣ್ಣಿನ ಫಲವತ್ತತೆಯನ್ನು ನಾವು ನಾಶ ಮಾಡುತ್ತಿದ್ದೇವೆ. ಇದರಿಂದ ನಾವು ತಿನ್ನುವ ಆಹಾರ ಕಲುಷಿತವಾಗುತ್ತಿದೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವ ಮಣ್ಣು ದಿನಾಚರಣೆಯ ಈ ವರ್ಷದ ಘೋಷ ವಾಕ್ಯ “ಮಣ್ಣು ಮತ್ತು ನೀರು-ಜೀವನದ ಮೂಲ” ಹಾಗೂ “ಸಮಸ್ಯಾತ್ಮಕ ಮಣ್ಣು ಹಾಗೂ ಅದರ ನಿರ್ವಹಣೆ” ಕುರಿತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಹ ಪ್ರಾಧ್ಯಾಪಕಿ ಡಾ.ಟಿ.ಜಯಂತಿ, ಗ್ರಾಮಸ್ಥರು, ಜಿಕೆವಿಕೆ ವಿದ್ಯಾರ್ಥಿಗಳು, ಸರ್ಕಾರಿ ಶಾಲಾ ಮಕ್ಕಳು ಹಾಜರಿದ್ದರು.