ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಇರುವ ನಗರಸಭೆಯ ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ್ದ 11 ನೇ ವಾರ್ಡಿನ ಮಹಿಳೆಯರಿಗೆ ಕಸ ವಿಲೇವಾರಿ ಕುರಿತು ಮಾಹಿತಿ ನೀಡಿ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿದರು.
ನಗರದ ಹನ್ನೊಂದನೇ ವಾರ್ಡನ್ನು ಪೈಲಟ್ ವಾರ್ಡ್ ಆಗಿ ಆರಿಸಿಕೊಂಡಿದ್ದು, ತ್ಯಾಜ್ಯ ವಿಲೇವಾರಿಯಿಂದ ಪ್ರಾರಂಭಗೊಂಡಂತೆ ಪ್ರತಿಯೊಂದು ರೀತಿಯಲ್ಲೂ ಮಾದರಿಯಾಗಿರುವಂತೆ ರೂಪಿಸಲಾಗುವುದು. ಸಾರ್ವಜನಿಕರು ನಗರಸಭೆಯವರೊಂದಿಗೆ ಸಹಕರಿಸುವ ಮೂಲಕ ನಗರವನ್ನು ಸುಂದರವಾಗಿಸಲು ನೆರವಾಗಬೇಕು ಎಂದು ಅವರು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನಿಮ್ಮ ಮನೆ ಅಥವಾ ಅಂಗಡಿಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಸುರಿಯಬಾರದು. ಅಡುಗೆ ಮನೆಯಲ್ಲಿ ಒಣ ಮತ್ತು ಹಸಿ ತ್ಯಾಜ್ಯಗಳಿಗೆ ಪ್ರತ್ಯೇಕ ಬಿನ್‌ಗಳನ್ನು ಇರಿಸಿಕೊಳ್ಳಬೇಕು. ಮನೆಯ ಉಳಿದ ಗೃಹ ತ್ಯಾಜ್ಯಗಳನ್ನು ಸಂಗ್ರಹಿಸಿಡಲು, ಅಂದರೆ ಕಾಗದ, ಪ್ಲಾಸ್ಟಿಕ್ ಇತ್ಯಾದಿಗಳಿಗೆ ಎರಡು ಚೀಲಗಳನ್ನು ಇರಿಸಿಕೊಳ್ಳಬೇಕು. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛವಾಗಿರಿಸಿ, ಒಣಗಿಸಿ, ನಂತರ ಒಣ ತ್ಯಾಜ್ಯ ಬಿನ್‌ಗೆ ಹಾಕಿ. ಗಾಜು, ಪ್ಲಾಸ್ಟಿಕ್ ಪಾತ್ರೆಗಳಿಂದ ಆಹಾರ ಪದಾರ್ಥವನ್ನು ತೊಳೆದಿಡಿ. ಹಸಿ ತ್ಯಾಜ್ಯವನ್ನು ಪ್ರತಿನಿತ್ಯ ಮನೆಯಿಂದ ಹೊರಕ್ಕೆ ಕಳುಹಿಸಿ. ಒಣ ತ್ಯಾಜ್ಯವನ್ನು ಮನೆಯಲ್ಲಿ ಶೇಖರಿಸಿಕೊಂಡು ವಾರಕ್ಕೊಮ್ಮೆ ವಿಲೇವಾರಿ ಮಾಡಿ. ಸ್ಯಾನಿಟರಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಾಗದದ ಚೀಲ ಇರಿಸಿಕೊಳ್ಳಿ. ಒಣ ತ್ಯಾಜ್ಯಗಳಾದ ಕಾಗದ, ಪ್ಲಾಸ್ಟಿಕ್, ಲೋಹ, ಗಾಜು, ರಬ್ಬರ್, ಥರ್ಮೋಕೋಲ್, ಬಟ್ಟೆ, ಚರ್ಮ, ರೆಕ್ಸಿನ್, ಮರ- ಇಂತಹ ದೀರ್ಘಕಾಲದವರೆಗೆ ಕೊಳೆಯದೆ ಇರುವಂತಹ ವಸ್ತುಗಳನ್ನು ಒಣಗಿಸಿ ಒಂದು ವಾರಗಳ ಮನೆಯಲ್ಲಿ ಶೇಖರಿಸಿ ಇಟ್ಟರೆ ದುರ್ನಾತ ಬರುವುದಿಲ್ಲ. ಹಾಲು, ಮೊಸರು, ಎಣ್ಣೆ, ಇಡ್ಲಿ ಹಿಟ್ಟು, ಆಹಾರ ಪದಾರ್ಥಗಳಿರುವ ಪ್ಲಾಸ್ಟಿಕ್ ಪಾಕೆಟ್‌ಗಳನ್ನು ತೊಳೆದು, ಒಣಗಿಸಿ, ನಂತರ ಒಣ ತ್ಯಾಜ್ಯ ಚೀಲಕ್ಕೆ ಹಾಕಿ. ಆಗ ಅವುಗಳಿಂದ ದುರ್ನಾತ ಬರುವುದಿಲ್ಲ ಎಂದು ವಿವರಿಸಿದರು.
ವ್ಯವಸ್ಥಾಪಕ ಸತ್ಯನಾರಾಯಣ್ ಮಾತನಾಡಿ, ಮನೆಗಳಲ್ಲಿ ಕಸ ವಿಂಗಡಣೆ ತುಂಬಾ ಸುಲಭ. ಮೊದ ಮೊದಲು ಸ್ವಲ್ಪ ಕಷ್ಟ ಎನಿಸಬಹುದು. ನೀವು ಮೊದಲ ಒಂದು ತಿಂಗಳು ಸ್ಚಲ್ಪ ಪ್ರಯತ್ನ ಹಾಕಿದರೆ, ನಂತರ ಅದು ನಿಮಗೆ ಒಂದು ಅಭ್ಯಾಸವಾಗಿಬಿಡುತ್ತದೆ. ಇದು ನಮ್ಮ ಊರನ್ನು ಉಳಿಸುವ ಒಂದು ಒಳ್ಳೆಯ ಅಭ್ಯಾಸ. ಎಡೆಬಿಡದ ಜಾಗೃತಿಯಿಂದ ಅಲ್ಲಿನ ನಾಗರಿಕರಿಗೆ ಅವರು ಉತ್ಪಾದಿಸುವ ಕಸದ ಮೇಲೆ ಹೆಚ್ಚಿನ ಅರಿವು ಬೆಳೆದಿದ್ದರಿಂದ. ಇಂದೋರ್ ಹಾಗೂ ಮೈಸೂರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಾದರೂ ಸ್ವಚ್ಛ ನಗರಿಗಳೆಂದು ಹೆಸರಾಗಿವೆ. ನಾವುಗಳು ಕೂಡ ಅವರಂತೆ ಪ್ಲಾಸ್ಟಿಕ್‌ಗಳ ಬಳಕೆಯನ್ನು ಕಡಿಮೆ ಮಾಡೋಣ ಎಂದರು.
ನಗರ ಸಭೆ ಸದಸ್ಯ ಎಲ್.ಅನಿಲ್ ಕುಮಾರ್ ಮಾತನಾಡಿ, ಸಾರ್ವಜನಿಕರೆಲ್ಲರು ಸಹಕಾರ ನೀಡಿದಾಗ ಮಾತ್ರ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಸಾಧ್ಯವಿದೆ. ನಿಮ್ಮ ಮನೆಗಳ ಬಳಿ ವಿಂಗಡಿಸಿದ ಕಸವನ್ನು ತೆಗೆದುಕೊಂಡು ಹೋಗಲು ಪ್ರತಿದಿನ ನಗರಸಭೆಯ ವಾಹನ ಬರುತ್ತದೆ. ಬರದಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು.
ನಗರ ಸಭೆ ಆರೋಗ್ಯ ನಿರೀಕ್ಷಕಿ ಶೋಭಾ ಅವರು ಮಹಿಳೆಯರಿಗೆ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಿದರು.