Kothanur, Sidlaghatta : ಯಾವ ಆಧಾರವಿಲ್ಲದೇ ಆಧಾರ್ ಕಾರ್ಡ್ ಮೇಲೆ ಸಾಲ ನೀಡಲಾಗುತ್ತಿದೆ. ಹಿಂದೆ ಬ್ಯಾಂಕ್ ಶ್ರೀಮಂತರ ಸ್ವತ್ತಾಗಿತ್ತು, ಅದರೆ ಮೋದಿರವರ ಯೋಜನೆಯಿಂದ ಬಡವರಿಗೆ ಬ್ಯಾಂಕ್ ಹತ್ತಿರವಾಗುವಂತಾಗಿದೆ. ಜನೌಷಧಿ ಕೇಂದ್ರದಿಂದ ಇಂದು ಕಡಿಮೆ ಬೆಲೆಗೆ ಔಷಧಿ ಸಿಗುವಂತಾಗಿದೆ. ಬಡವ ಸ್ವಾಭಿಮಾನಿಯಾಗಿ ಬದುಕಲು ಸಹಕಾರಿಯಾಗಿದೆ ಎಂದು ಬಿಜೆಪಿ ಮುಖಂಡ ಆನಂದಗೌಡ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಭಾನುವಾರ ಗ್ರಾಮ ಪಂಚಾಯಿತಿ, ಪ್ರಗತಿ ಗ್ರಾಮೀಣ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲಿ ಆರೋಗ್ಯದ ವೆಚ್ಚದಲ್ಲಿ ದುಬಾರಿಯಾಗಿದೆ. ಆದರೆ ನಮ್ಮಲ್ಲಿ ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಚಿಕಿತ್ಯೆ ಜನೌಷಧಿ ಕೇಂದ್ರ ಆರಂಭಿಸಲಾಗಿದೆ. ಕೊವಿಡ್ ಸಾಂಕ್ರಮಿಕ ರೋಗ ತಡೆಯಲು ವಾಕ್ಸಿನ್ ಗಳನ್ನು ದೇಶದ ಜನರಿಗೆ ಉಚಿತವಾಗಿ ನೀಡಲಾಗಿದೆ. ನಮ್ಮ ದೇಶದಲ್ಲಿ ತಯಾರದ ಕೊವಿಡ್ ವಾಕ್ಸಿನ್ 140 ಕ್ಕೂ ಹೆಚ್ಚು ದೇಶದಲ್ಲಿ ಬಳಕೆ ಮಾಡುತ್ತಿದ್ದಾರೆ.ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್ ಯೋಜನೆ ಕೊಟ್ಯಂತರ ಜನರ ಉಪಯೋಗ ಪಡೆದಿದ್ದಾರೆ. ಸ್ವನಿಧಿ ಮತ್ತು ಮುದ್ರ ಯೋಜನೆ ಯಾವುದೇ ಗ್ಯಾರಂಟಿ ಇಲ್ಲದೇ ನೇರವಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಆರ್ಥಿಕವಾಗಿ ದೇಶ ಬೆಳವಣಿಗೆಯಾಗುತ್ತಿದೆ ಎಂದರು.
ಬಡ ಜನರು ಸಾಲ ತೆಗೆದುಕೊಂಡಿರುವವರು ಸಾಲ ತೀರಿಸುತ್ತಿದ್ದಾರೆ.
ಹತ್ತು ವರ್ಷಗಳ ಹಿಂದೆ ಬ್ಯಾಂಕ್ ಅಕೌಂಟ್ ಓಪನ್ ಮಾಡಿ ಪ್ರಧಾನಿ ಮೋದಿ ರವರು ಹೇಳಿದರು. ಇದರಿಂದ ಸರ್ಕಾರದ ಯೋಜನೆಗಳನ್ನು ನೇರವಾಗಿ ಅವರ ಖಾತೆಗಳಿಗೆ ಹಾಕಲಾಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಮೋದಿ ಗ್ಯಾರಂಟಿ ಯೋಜನೆಗಳು ಇಂದು ವಿಶ್ವಮಾನ್ಯತೆ ಪಡೆದಿದೆ. ಇದು ವರ್ಷ ಬಹಳ ಮಹತ್ವಪೂರ್ಣ ವರ್ಷ, ಮೋದಿ ಗ್ಯಾರಂಟಿ ಬಗ್ಗೆ ನಂಬಿಕೆ ಇಡಿ ಎಂದು ಹೇಳಿದರು.
ವಿಕಸಿತ ಭಾರತ ಕಳೆದ ಹತ್ತು ವರ್ಷಗಳಿಂದ ಅಭಿವೃದ್ದಿ ಕಾರ್ಯಗಳನ್ನು ತಿಳಿಯಪಡಿಸಲಾಗುತ್ತಿದೆ. ಬಡವರ ಶ್ರೀಮಂತರಾಗಬೇಕು ಎಂದು ಯೋಜನೆಗಳನ್ನು ನಿರ್ಮಿಸಲಾಗಿದೆ. ಜನೌಷಧಿ, ಉಜ್ವಲ ಯೋಜನೆ, ಮುದ್ರ ಯೋಜನೆಗಳು ಕೊಟ್ಯಂತರ ಜನರು ಫಲಾನುಭವಿಗಳು ಇದ್ದಾರೆ. ಕೇವಲ 20 ರೂಪಾಯಿಗೆ ಜೀವವಿಮೆ ಮತ್ತು ಸರಳ ಸಾಲ ಸೌಲಭ್ಯ ನೀಡಲಾಗಿದೆ ಎಂದು ನುಡಿದರು.
ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಮಾತನಾಡಿ, ಬ್ಯಾಂಕ್ ಮೂಲಕ ಸಿಗುವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು.
ತಾಲ್ಲೂಕು ಆರೋಗ್ಯ ನಿರೀಕ್ಷಕ ದೇವರಾಜ್ ಮಾತನಾಡಿ, ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಕುರಿತಂತೆ ವಿವರಿಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ನರೇಂದ್ರ, ಪಿ.ಡಿ.ಒ ಪವಿತ್ರಾ, ಸದಸ್ಯರಾದ ಪಿಳ್ಳಮ್ಮ, ಮುನಿರತ್ನಮ್ಮ, ವೆಂಕಟರಮಣ, ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶೇಖರ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಮೇಶ್, ತಾಲ್ಲೂಕು ಆರೋಗ್ಯ ನಿರೀಕ್ಷಕ ದೇವರಾಜ್, ತೋಟಗಾರಿಕಾ ಇಲಾಖೆಯ ಲಕ್ಷ್ಮೀನಾರಾಯಣ, ಆರ್ಥಿಕ ಸಲಹೆಗಾರ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿವಪ್ಪ, ನರಸಿಂಹಮೂರ್ತಿ, ರವಿಚಂದ್ರ, ಜಗದೀಶರೆಡ್ಡಿ, ಶಂಕರ್, ಮನೋಜ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.