Melur, Sidlaghatta : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಡತನ ರೇಖೆಗಿಂತ ಕಡಿಮೆಯಿರುವವರ ಜೀವನ ಮಟ್ಟವನ್ನು ಸುಧಾರಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವ ಯಾತ್ರೆ ಇದಾಗಿದ್ದು, ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಅದರ ಲಾಭ ಸಿಗುವಂತೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಿದೆ ಎಂದು ಬಿಜೆಪಿ ಮುಖಂಡ ಆನಂದಗೌಡ ತಿಳಿಸಿದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಸಮುದಾಯ ಭವನದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಫೋಷಣ ಅಭಿಯಾನ, ಉಜ್ವಲಾ ಯೋಜನೆ, ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ, ಫಸಲ್ ಬಿಮಾ ಯೋಜನೆ, ಕೌಶಲಾಭಿವೃದ್ಧಿ ಯೋಜನೆ, ಜನೌಷಧಿ ಯೋಜನೆ, ವಿಶ್ವಕರ್ಮ ಯೋಜನೆ ಮುಂತಾದವುಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ಒಟ್ಟಾರೆ, ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಬೇಕು ಎಂಬ ಆಶಯವನ್ನು ಹೊಂದಿರುವುದಾಗಿ ಹೇಳಿದರು.
ಪಿ.ಎಂ. ಕಿಸಾನ್ ಡ್ರೋನ್ ಯೋಜನೆ :
ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಜವಾಬ್ದಾರಿ. ಆದರಿಂದ ಪ್ರಧಾನ ಮಂತ್ರಿ ಪಿಎಂ ಕಿಸಾನ್ ಡ್ರೋನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಶೇ 70 ರಷ್ಟು ಸಹಾಯಧನ ನೀಡುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಇಟ್ಟುಕೊಂಡು ರೈತರಿಗೆ ಬಾಡಿಗೆಗೆ ಸಹ ನೀಡಬಹುದಾಗಿದೆ. ಇದರ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕೆಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಕುರಿತಂತೆ ವಿವರಿಸಿದರು.
ಪ್ರಗತಿ ಗ್ರಾಮೀಣ ಬ್ಯಾಂಕ್ ನ ಅಧಿಕಾರಿ ರಮಾಕಾಂತ್ ಮಾತನಾಡಿ, ಬ್ಯಾಂಕ್ ಮೂಲಕ ಸಿಗುವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಆರೋಗ್ಯಇಲಾಖೆಯ ದೇವರಾಜ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಮಾಕಾಂತ್ ಯಾದವ್, ಮೇಲೂರು ಕೆನರಾಬ್ಯಾಂಕ್ ವ್ಯವಸ್ಥಾಪಕಿ ಸಿಂಧೂಜ, ಗ್ರಾಮಪಂಚಾಯಿತಿ ಸದಸ್ಯ ಆರ್.ಎ. ಉಮೇಶ್, ಮೇಲೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ರಮೇಶ್, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಭಾಸ್ಕರ್, .ಗ್ರಾಮಪಂಚಾಯಿತಿ ಸದಸ್ಯರಾದ ಎಂ.ಜೆ.ಶ್ರೀನಿವಾಸ್, ಸವಿತ, ದಲಿತ ಸಂಘರ್ಷ ಸಮಿತಿಯ ಮೇಲೂರು ಮಂಜುನಾಥ್, ವಿಶ್ವಾಸ್, ಆಶಾಕಾರ್ಯಕರ್ತೆಯರು ಹಾಜರಿದ್ದರು.