Chikkadasarahalli, Sidlaghatta : ವೈಜ್ಞಾನಿಕ ಕ್ಷೇತ್ರದಲ್ಲಿ ಅಗಾಧವಾದ ಬೆಳವಣಿಗೆಗಳು, ಸಂಶೋಧನೆಗಳು ವೇಗವಾಗಿ ನಡೆಯುತ್ತಿವೆ. ವಿಜ್ಞಾನದ ಹಾದಿಯನ್ನು ಸಾಮಾನ್ಯ ಜನರಿಗೆ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಮಾಡುವ ಸದುದ್ದೇಶದಿಂದ ವಿಜ್ಞಾನ ಗ್ರಾಮ ನಿರ್ಮಾಣ ಮಾಡಲಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಡಾ.ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಚಿಕ್ಕದಾಸರಹಳ್ಳಿ ಬಳಿ ಉದ್ಯಮಿ ಬಿಳಿಶಿವಾಲೆ ರವಿ ಅವರು ಉಚಿತವಾಗಿ ನೀಡಿರುವ 10 ಎಕರೆ ಜಮೀನಿ
ನಲ್ಲಿ ಮಂಗಳವಾರ “ವಿಜ್ಞಾನ ಗ್ರಾಮ” ಭೂಮಿ ಪೂಜೆ ಮತ್ತು ವಿಜ್ಞಾನ ಜ್ಯೋತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ಮೂಢ ನಂಬಿಕೆ, ಅಂಧಶ್ರದ್ದೆಗಳ ವಿರುದ್ಧ ಹೋರಾಟವನ್ನು ನಡೆಸುತ್ತಿರುವ, ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿ ಮೂಢ ನಂಬಿಕೆಗಳನ್ನು ಹೋಗಲಾಡಿಸಿ ಪವಾಡಗಳನ್ನು ಬಯಲು ಮಾಡುತ್ತಿರುವ ಪವಾಡ ಭಂಜಕ ಹುಲಿಕಲ್ ನಟರಾಜ್ ಹಾಗೂ ಅವರ ಸ್ನೇಹಿತರು ಸೇರಿ ವಿಜ್ಞಾನ ಗ್ರಾಮ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ್ನು ರಚಿಸಿಕೊಂಡಿದ್ದು ಪರಿಷತ್ ಮೂಲಕ ನಿರ್ಮಿಸುವ ವಿಜ್ಞಾನ ಗ್ರಾಮವು ಇದೀ ರಾಜ್ಯಕ್ಕೇ ಮಾದರಿಯಾಗಲಿ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ “ವಿಜ್ಞಾನ ಗ್ರಾಮ” ಮಾಡುತ್ತಿರುವುದು ಹೆಮ್ಮೆಯ ವಿಷಯ. ಇದರಿಂದಾಗಿ ಮುಂದಿನ ಪೀಳಿಗೆಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ ಎಂದರು.
ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ವಿಜ್ಞಾನ ಗ್ರಾಮ ನಿರ್ಮಾಣದ ಉದ್ದೇಶಗಳನ್ನು ಹುಲಿಕಲ್ ನಟರಾಜ್ ಅವರು ವಿವರಿಸಿದರು. ವಿಜ್ಞಾನ ಗ್ರಾಮದ ಪರಿಕಲ್ಪನೆ ದೇಶದಲ್ಲೆ ಮೊದಲಾಗಿದೆ. ಉದ್ಯಮಿ ಬಿಳಿಶಿವಾಲೆ ರವಿ ಅವರು ಉಚಿತವಾಗಿ 10 ಎಕರೆ ಜಮೀನು ನೀಡಿದ್ದಾರೆ. ಇಲ್ಲಿ ವಿಜ್ಞಾನಿಗಳ ಪರಿಚಯ, ಆವಿಷ್ಕಾರಗಳು, ತರಬೇತಿ, ಕಾರ‍್ಯಾಗಾರಗಳು ನಡೆಯಲಿವೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಾಣವಾಗುವ ವಿಜ್ಞಾನ ಗ್ರಾಮದ ಮೂಲಕ ಅಂಧಶ್ರದ್ದೆಗಳು, ಮೌಢ್ಯಗಳನ್ನು ಹೋಗಲಾಡಿಸುವ ವೈಜ್ಞಾನಿಕ ಭಾವನೆಯನ್ನು ಬೆಳೆಸಲಾಗುತ್ತದೆ. ಬರದ ನಾಡು ಕೋಲಾರ ಎಂಬುದರ ಬದಲಿಗೆ ವಿಜ್ಞಾನದ ನಾಡು ಎನ್ನುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಸರ್ಕಾರಕ್ಕೂ ಪ್ರಸ್ತಾವನೆ ಕಳುಹಿಸಿ ಹಣಕಾಸಿನ ನೆರವು ಕೋರುತ್ತೇವೆ. ದೊರೆತರೆ ಒಳ್ಳೆಯದು, ಇಲ್ಲವಾದರೆ ದಾನಿಗಳಿಂದ, ಸಂಘ ಸಂಸ್ಥೆಗಳಿಂದ ಹಣಕಾಸನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್, ಪರಿಷತ್‌ನ ಉಪಾಧ್ಯಕ್ಷ ಡಾ.ಆಂಜಿನಪ್ಪ, ಭೂದಾನಿ ಬಿಳಿಶಿವಾಲೆ ರವಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಪದಾಧಿಕಾರಿಗಳು ಹಾಜರಿದ್ದರು.