Sidlaghatta : ಶಾಲಾ ಕಾಲೇಜುಗಳಲ್ಲಿ ನಮ್ಮ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳು ಹಾಗೂ ಸಂಸ್ಕೃತಿ ಸಂಪ್ರದಾಯಗಳ ಮಹತ್ವ, ಆಚಾರ ವಿಚಾರಗಳನ್ನು ತಿಳಿಸಿಕೊಟ್ಟು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದು ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಭಾಸ್ಕರ್‌ಗೌಡ ತಿಳಿಸಿದರು.
ನಗರದಲ್ಲಿನ ವಾಸವಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸುಗ್ಗಿ ಹಬ್ಬದಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಆಚರಿಸುವ ಪ್ರತಿ ಹಬ್ಬ ಹರಿದಿನ ಆಚರಣೆ ಸಂಪ್ರದಾಯದ ಹಿಂದೆ ಅದರದ್ದೇ ಆದ ಅರ್ಥ ಇತಿಹಾಸ ವೈಜ್ಞಾನಿಕ ಕಾರಣಗಳಿವೆ. ಅವುಗಳನ್ನು ಅರಿತು ಅವುಗಳ ಆಚರಣೆ ಆಗಬೇಕು, ಮೂಢ ನಂಬಿಕೆ ಆಚರಣೆಗೆ ಅವಕಾಶ ಆಗಬಾರದು ಎಂದರು.
ಶಾಲಾ ಕಾಲೇಜುಗಳಲ್ಲಿ ಕೇವಲ ಪಾಠ ಪ್ರವಚನಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೂ ಆಧ್ಯತೆ ನೀಡಬೇಕು, ಮಕ್ಕಳ ದೈಹಿಕ ಮಾನಸಿಕ ಸದೃಢತೆ ಹೆಚ್ಚಬೇಕು, ಆ ಮೂಲಕ ಅವರಲ್ಲಿ ಜ್ಞಾನಾರ್ಜನೆ ಶಕ್ತಿ ಹೆಚ್ಚಿಸಬೇಕೆಂದರು.
ದವಸ ದಾನ್ಯದ ರಾಶಿ ಮಾಡಿ ಪೂಜಿಸಲಾಯಿತು. ಹಾಲನ್ನು ಉಕ್ಕಿಸುವ ಮೂಲಕ ಸಂಕ್ರಾಂತಿ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗೋವಿಗೆ ಪೂಜೆ ಸಲ್ಲಿಸಿ ಹಣ್ಣು ಹಂಪಲನ್ನು ತಿನ್ನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವೇಷ ಭೂಷಣ ಸ್ಪರ್ಧೆ ನಡೆಯಿತು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೃಷ್ಣಯ್ಯಶೆಟ್ಟಿ, ಕಾರ್ಯದರ್ಶಿ ರೂಪಸಿ ರಮೇಶ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್, ಬಿ.ಎಸ್.ಎಫ್ ಯೋಧ ರಾಜೇಶ್, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್, ವಿ.ಎಸ್.ರಾಜೇಶ್, ರಾಘವೇಂದ್ರ, ಗಜಲಕ್ಷ್ಮಿ, ಭಾರತಿ ರಾಜೇಶ್, ಶಿವಕುಮಾರ್, ರವಿ ಹಾಜರಿದ್ದರು.