ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ಹಣದ ಬಲದ ಮೇಲೆ ರಾಜಕಾರಣ ಮಾಡುವವರಿಗೆ ಕ್ಷೇತ್ರದಲ್ಲಿ ಉಳಿಗಾಲವಿಲ್ಲ. ನನ್ನ ಭಾವಚಿತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತಿರುವವರನ್ನು ಬೆಂಬಲಿಸಬಾರದೆಂದು ಅವರು ತಿಳಿಸಿದರು.
ಕ್ಷೇತ್ರದಲ್ಲಿ ಸುಮಾರು 40-45 ವರ್ಷಗಳಿಂದ ರಾಜಕಾರಣವನ್ನು ಮಾಡುತ್ತಾ ಬಂದಿದ್ದೇನೆ. ಮತದಾರರ ಆಶೀರ್ವಾದದಿಂದ ಕ್ಷೇತ್ರದ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವ ಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಹಣದಾಸೆಗಾಗಿ ಮತವನ್ನು ಮಾರಿಕೊಳ್ಳುವವರು ಯಾರು ಇಲ್ಲ. ಯಾರು ಒಳ್ಳೆಯವರು ಮತ್ತು ಕ್ಷೇತ್ರದ ಹಿತ ಕಾಪಾಡುವವರು ಎಂಬುದನ್ನು ಮತದಾರರು ಅರಿತಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದ ಮತ್ತು ಮತದಾರರ ಬೆಂಬಲದಿಂದ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಆದರೆ ಕೆಲವರು ತಮ್ಮಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಉಳಿದುಕೊಂಡಿದೆ ಎಂದು ಪ್ರತಿಬಿಂಬಿಸಲು ಹೊರಟಿರುವುದು ಹಾಸ್ಯಸ್ಪದ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದೆ. ತತ್ವ ಸಿದ್ದಾಂತಗಳ ಆಧಾರದ ಮೇಲೆ ಪಕ್ಷವನ್ನು ಸಂಘಟನೆ ಮಾಡಲಾಗಿದೆ. ನನ್ನ ಭಾವಚಿತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಅಂತಹದಕ್ಕೆ ಯಾರೂ ಸಹ ಪ್ರೋತ್ಸಾಹ ಮತ್ತು ಬೆಂಬಲ ನೀಡಬಾರದೆಂದು ಪರೋಕ್ಷವಾಗಿ ಎಸ್‍ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ವಿರುದ್ದ ಸ್ಪರ್ಧಿಸಿ ಇದೀಗ ನಾನು ಸಹ ಕಾಂಗ್ರೆಸಿಗ ಎಂದು ಪ್ರಚಾರ ಗಿಟ್ಟಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬೇರೆ ಕ್ಷೇತ್ರಗಳಿಂದ ಬಂದು ರಾಜಕಾರಣ ಮಾಡುವವರಿಗೆ ಮತ್ತು ಹಣದ ಬಲದಿಂದ ಕ್ಷೇತ್ರದ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಬಹುದು ಎಂಬುದು ಕೇವಲ ಭ್ರಮೆ. ಕ್ಷೇತ್ರದ ಮತದಾರರು ಬುದ್ದಿವಂತರು ಪ್ರಬುದ್ದರು. ಈ ಕ್ಷೇತ್ರದ ಅಭಿವೃದ್ದಿಗಾಗಿ ಯಾರು ಏನು ಮಾಡಿದ್ದಾರೆ ಅವರ ಕೊಡುಗೆಗಳೇನು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದೆ ಎಂದರು.
ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ಎನ್.ಮುನಿಯಪ್ಪ, ಆನಂದ್, ರಾಜು, ಭಕ್ತರಹಳ್ಳಿ ಚಿದಾನಂದಮೂರ್ತಿ, ಮಹೇಶ್, ಸುನೀಲ್, ಮಧುಗೌಡ, ಮಧುಸೂದನ್, ಶ್ರೀನಾಥ್ ಹಾಜರಿದ್ದರು.