ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ನಗರದ ನಗರಸಭೆ ಮುಂಭಾಗ ಭಾನುವಾರ ಪೌರಕಾರ್ಮಿಕರು, ಸರ್ಕಾರಿ ಆಸ್ಪತ್ರೆ ಹಾಗು ಪೊಲೀಸ್ ಸಿಬ್ಬಂದಿಗೆ ಊಟ ವಿತರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಕೋವಿಡ್ ಎರಡನೇ ಅಲೆಯ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು, ಮಾನವೀಯತೆಗೆ ಆದ್ಯತೆ ಕೊಡಬೇಕು. ಜಾತಿ, ಮತ, ಮೇಲು, ಕೀಳು, ಉಳ್ಳವರು, ಇರದವರು, ಅಧಿಕಾರ, ಅಹಂಕಾರವನ್ನು ತ್ಯಜಿಸಬೇಕು. ಕೊರೊನಾ ಎಂಬ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಈ ದಿನಮಾನದಲ್ಲಿ ಪರಸ್ಪರ ನೆರವಾಗುವುದನ್ನು ರೂಡಿಸಿಕೊಳ್ಳಬೇಕು ಕೊರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಮತ್ತು ಸಾಮಾಜಿಕ ಬೆಂಬಲ ವ್ಯಕ್ತಪಡಿಸಬೇಕು ಎಂದು ಅವರು ಹೇಳಿದರು.
ಕೊರೋನಾ ವೈರಸ್ ಕಣ್ಣಿಗೆ ಕಾಣಿಸದೇ ಇರುವುದರಿಂದ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ನಗರದ ವಿವಿಧ ವಾರ್ಡುಗಳ ಜವಾಬ್ದಾರಿಯನ್ನು ಆಯಾ ವಾರ್ಡಿನ ಯುವಕರು ಹೊತ್ತು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕು. ತಮ್ಮ ಕೈಲಾದ ಸಹಾಯ ಮಾಡಿ ಹೆಚ್ಚಿನ ಅಗತ್ಯ ಬಿದ್ದರೆ ನನ್ನ ಗಮನಕ್ಕೆ ತನ್ನಿ, ಸಾಧ್ಯವಾದಷ್ಟೂ ನೆರವು ನೀಡಲು ಸಿದ್ದನಿದ್ದೇನೆ ಎಂದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿನಿತ್ಯ ದುಡಿಯುತ್ತಿರುವ ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವಾಗಬೇಕು. ಎಷ್ಟು ಸಾಧ್ಯವೋ ಅಷ್ಟು ಅಳಿಲು ಸೇವೆಯನ್ನು ಸಲ್ಲಿಸುವ ಮೂಲಕ, ನಾವು ಕೂಡ ಈ ಹೋರಾಟದಲ್ಲಿ ಪರೋಕ್ಷವಾಗಿಯಾದರೂ ಪಾಲ್ಗೊಳ್ಳೋಣ ಎಂದು ಹೇಳಿದರು.
ನಗರಸಭೆ ಸದಸ್ಯ ಅನಿಲ್ ಕುಮಾರ್, ಕೃಷ್ಣಮೂರ್ತಿ ಮುಖಂಡರಾದ ಮನೋಹರ್, ಎಲ್.ಮಧುಸೂದನ್, ಕೆ.ಎನ್.ಮುನೀಂದ್ರ, ವಿಜಯ್, ಸಾದಿಕ್, ರಾಜಕುಮಾರ್, ನಾಗನರಸಿಂಹ ಹಾಜರಿದ್ದರು.