Sidlaghatta : ಕೃಷಿಯಲ್ಲಿ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್(ಸಂಯುಕ್ತ) ರಸಗೊಬ್ಬರವನ್ನು ಬಳಕೆ ಮಾಡಬೇಕೆಂದು ರೈತರಲ್ಲಿ ಸಹಾಯಕ ಕೃಷಿ ನಿರ್ದೇಶಕ ರವಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ದಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ. 17 ಅಂಶಗಳ ಪೈಕಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಸಿಗುತ್ತದೆ ಎಂದರು.
ಇನ್ನುಳಿದ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಕ್ಯಾಲ್ಸಿಯಂ, ಮೆಗ್ನೀಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬ್ಡಿನಂ, ಕ್ಲೋರಿನ್ ಮತ್ತು ನಿಕ್ಕಲ್ ಕಡಿಮೆ ಪ್ರಮಾಣದಲ್ಲಿ ಸಸಿಗಳಿಗೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಪ್ರಧಾನ ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೆ ಆಧಾರವಾಗಿದ್ದು ಮಣ್ಣಿನಿಂದ ಈ ಎಲ್ಲ ಅಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ಸಿಗುವುದಿಲ್ಲವಾದ್ದರಿಂದ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇನ್ನಿತರೆ ರಸಗೊಬ್ಬರಗಳ ಮೂಲಕ ಸಸಿಗಳಿಗೆ ಒದಗಿಸಬೇಕು.
ಆದರೆ ರೈತರು ಅನಾದಿಕಾಲದಿಂದಲೂ ಯೂರಿಯಾ ಮತ್ತು ಡಿಎಪಿಯನ್ನು ಮಾತ್ರ ನೀಡುವುದನ್ನು ವಾಡಿಕೆ ಮಾಡಿಕೊಂಡಿದ್ದು ಅದರಲ್ಲಿ ಸಾರಜನಕ ಮತ್ತು ರಂಜಕ ಅಂಶಗಳಷ್ಟೆ ಇರಲಿದ್ದು ಪೊಟ್ಯಾಷ್ ಅಂಶ ಇರುವುದಿಲ್ಲ. ಹಾಗಾಗಿ ಸಸಿಗಳ ಸಂಪೂರ್ಣ ಬೆಳವಣಿಗೆಗೆ ಅಗತ್ಯವಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಇರುವ ರಸಗೊಬ್ಬರಗಳನ್ನು 4:2:1 ರ ಅನುಪಾತದಲ್ಲಿ ನೀಡಬೇಕು.
ಆದರೆ ರೈತರು ಇದೀಗ ಬಳಸುತ್ತಿರುವ ಗೊಬ್ಬರಗಳು 5:3:1 ರ ಅನುಪಾತದಲ್ಲಿದ್ದು ಇದು ಭೂಮಿಯ ಫಲವತ್ತತೆಯನ್ನು ಕಲುಷಿತಗೊಳಿಸುತ್ತಿದೆ ಎಂದು ವಿವರಿಸಿದರು.
ಆದ್ದರಿಂದ ಸಾರಜನಕ ಮತ್ತು ರಂಜಕ ಮಾತ್ರ ಇರುವ ರಸಗೊಬ್ಬರಗಳನ್ನು ಬಳಸದೆ ಸಸಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕಾಳಿನ ತೂಕ ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಕೆಲಸ ಮಾಡುವ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕು ಮತ್ತು 4:2:1 ರ ಅನುಪಾತದಲ್ಲಿ ನೀಡಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.