Sidlaghatta : ಪರಿಸರ ಸಂಘ ಬೆಂಗಳೂರು ವತಿಯಿಂದ ಶಿಡ್ಲಘಟ್ಟದ ಶಿಡ್ಲಘಟ್ಟದ ಉರ್ದು ಪ್ರೌಢಶಾಲೆಯ ಐವತ್ತೂ ಹೆಚ್ಚು ಮಕ್ಕಳಿಗೆ ಬೆಂಗಳೂರಿನ “ಲಾಲ್ ಬಾಗ್ ಪರ್ಯಟನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಲಾಲ್ ಬಾಗ್ ನಲ್ಲಿ ಗಿಡಮರಗಳು, ಹೂತೋಟ, ಬೋನ್ಸಾಯ್ ತೋಟಗಳ ದರ್ಶನ ಮಾಡಿಸಿ ಅವರಿಗೆ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.
ಪರಿಸರ ಜಾಗೃತಿ ಮೂಡಿಸುವಲ್ಲಿ, ಕೃಷಿ ಹಾಗೂ ರೈತ ಪ್ರಜ್ಞೆಯನ್ನು ಮಕ್ಕಳು ಮತ್ತು ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯವನ್ನು ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ನಡದೂರು ಅವರ ನೇತೃತ್ವದ ಪರಿಸರ ಸಂಘ ಬೆಂಗಳೂರು ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ.
ಪರಿಸರ ಸಂಘದ ಅಧ್ಯಕ್ಷ ನಡದೂರು ಮಾತನಾಡಿ, “ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ 25 ಶಾಲೆಗಳಲ್ಲಿ ಮಳೆ ಕೊಯ್ಲು ಪದ್ದತಿ ಅಳವಡಿಸಲಾಗಿದೆ. ಇದನ್ನು 100 ಶಾಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಶಿಡ್ಲಘಟ್ಟ ನಗರದ ಕೆಲವು ಶಾಲೆಗಳು ಸೇರಿದಂತೆ ವಿವಿಧ ನಗರಗಳ 15 ಶಾಲೆಗಳಲ್ಲಿ “ನಮ್ಮ ತೋಟ” ನಿರ್ಮಿಸಲಾಗಿದೆ. ಮಕ್ಕಳು ಬಿಸಿಯೂಟಕ್ಕೆ ಬಳಸುವ ತರಕಾರಿಗಳನ್ನು ತಮ್ಮ ಶಾಲೆಯ ಅಂಗಳದಲ್ಲಿಯೇ ಬೆಳೆಯುವ ಈ ಯೋಜನೆಯನ್ನು 250 ಶಾಲೆಗಳಿಗೆ ವಿಸ್ತರಿಸಲಾಗುವುದು. ವನ ಮಹೋತ್ಸವ ಸಮಾರಂಭಗಳ ಮೂಲಕ ರೈತರ ಹೊಲ, ಗದ್ದೆಗಳಲ್ಲಿ ಸುಮಾರು ಐದು ಸಾವಿರ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ಶಿಡ್ಲಘಟ್ಟದ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಲಾಲ್ ಬಾಗ್ ತೋರಿಸಿ ಗಿಡ ಮರ, ಪಕ್ಷಿ, ಕೀಟಗಳ ಪರಿಚಯ ಮಾಡಿಸಿದ್ದೇವೆ” ಎಂದರು.
ಲಾಲ್ ಬಾಗ್ ಪರ್ಯಟನೆಯಲ್ಲಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಹೇಶ್ವರ್, ಶಿಡ್ಲಘಟ್ಟ ಉರ್ದು ಪ್ರೌಢಶಾಲೆಯ ಅಧ್ಯಾಪಕ ವರ್ಗದವರು, ಐವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.