ಶಿಡ್ಲಘಟ್ಟ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಕಳೆದ ಜನವರಿಯಿಂದ ಇಂದಿನವರೆಗೂ ಕೋವಿಡ್ ನಿಂದ ಗುಣಮುಖರಾದ ವ್ಯಕ್ತಿಗಳನ್ನು ಕೇಂದ್ರೀಕೃತವಾಗಿಸಿಕೊಂಡು ಮನೆ ಮನೆ ಭೇಟಿ ನೀಡಿ ಕ್ಷಯರೋಗ ಪತ್ತೆ ಹಚ್ಚುವುದು ಸೇರಿದಂತೆ ಸೂಕ್ತ ಚಿಕಿತ್ಸೆ ಒದಗಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಮನೆ ಬಾಗಿಲಿಗೆ ತೆರಳಿ ಕ್ಷಯರೋಗ ಪತ್ತೆ ಹಚ್ಚುವ ಹಾಗೂ ನಿರ್ಮೂಲನೆ ಮಾಡುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ತಾಲ್ಲೂಕಿನಾಧ್ಯಂತ ಆಗಸ್ಟ್ 16 ರಿಂದ 21 ರವರೆಗೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿತ್ಸೆಯನ್ನು ಪಡೆದುಕೊಂಡರೆ ಗುಣವಾಗುತ್ತದೆ. ದೇಶದಲ್ಲಿ ಕ್ಷಯರೋಗವನ್ನು ಕೊನೆಗಾಣಿಸಿ ಕ್ಷಯಮುಕ್ತ ಭಾರತ ಎಂದು ಷೋಷಿಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ಷಯರೋಗ ಪತ್ತೆ ಹಚ್ಚಲು ಮನೆ ಮನೆಗೆ ಭೇಟಿ ನೀಡುವ ಮೂಲಕ ಸಮೀಕ್ಷೆ ನಡೆಸಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ರೋಗದ ಬಗ್ಗೆ ಅರಿವು ಮೂಡಿಸುತ್ತಾರೆ. ಸಂಭಾವ್ಯ ಕ್ಷಯ ಪ್ರಕರಣಗಳು ಕಂಡು ಬಂದರೆ ಪರೀಕ್ಷೆಗೆ ಒಳಪಡಿಸುತ್ತಾರೆ. ಕ್ಷಯರೋಗ ದೃಢಪಟ್ಟಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತದೆ. ಯಾವುದೇ ಹಿಂಜರಿಕೆ ಇಲ್ಲದೆ ಸಾರ್ವಜನಿಕರು ತಪಾಸಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ರೋಗ ಲಕ್ಷಣ ಇರುವವರು ಚಿಕಿತ್ಸೆ ಹಾಗೂ ಸೇವಾ ಸೌಲಭ್ಯ ಪಡೆದುಕೊಳ್ಳಲು ಬರುವ ಬದಲಿಗೆ ಸೇವಾ ವಲಯವೇ ರೋಗ ಲಕ್ಷಣ ಇರುವವರ ಬಳಿ ತೆರಳಿ ಸೂಕ್ತ ಚಿಕಿತ್ಸೆ ನೀಡುವುದು ಆ ಆಂದೋಲನದ ವೈಶಿಷ್ಟ್ಯವಾಗಿದೆ. ಹಾಗಾಗಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರಿಗೆ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಗುರು, ಡಾ.ಯಶವಂತ್, ಆರೋಗ್ಯ ನಿರೀಕ್ಷಕರಾದ ಲೋಕೇಶ್, ದೇವರಾಜ್, ಸಿಬ್ಬಂದಿ ಸುಮಂಗಲ, ಅಪೇಕ್ಷಾ ಹಾಗು ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi