Lakkahalli, Sidlaghatta : ಚಲಿಸುತ್ತಿದ್ದ ರೈಲಿಗೆ ಸಿಕ್ಕಿ 62 ಕುರಿಗಳು ಮತ್ತು 6 ಮೇಕೆಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕು ಲಕ್ಕಹಳ್ಳಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಚಿಕ್ಕಬಳ್ಳಾಪುರ-ಶಿಡ್ಲಘಟ್ಟ-ಕೋಲಾರಕ್ಕೆ ತಲುಪುವ ರೈಲು ಮಾರ್ಗದಲ್ಲಿ ಬರುವ ಲಕ್ಕಹಳ್ಳಿ ಗ್ರಾಮದ ಬಳಿಯ ರೈಲ್ವೆ ಹಳಿಗಳ ಬಳಿ ಕುರಿಗಾಹಿಗಳಾದ ಆಂಜಿನಪ್ಪ, ಗಂಗರಾಜಮ್ಮ, ನಾರಾಯಣಮ್ಮ ಹಾಗೂ ಶಶಿಕಲಾ ಎಂಬುವವರು ಕುರಿಗಳ ಮಂದೆಯನ್ನು ಬಯಲಿನಲ್ಲಿ ಮೇಯಿಸುತ್ತಿದ್ದರು.
ಈ ವೇಳೆಯಲ್ಲಿ ನಾಯಿಗಳು ಕುರಿ ಹಿಂಡಿನ ಮೇಲೆ ದಾಳಿ ಮಾಡಿವೆ. ನಾಯಿಗಳ ದಾಳಿಯಿಂದ ಬೆದರಿದ ಕುರಿಗಳು ರೈಲು ಬರುವುದನ್ನು ಲೆಕ್ಕಿಸದೆ ರೈಲ್ವೆ ಹಳಿಗಳ ಕಡೆ ಹಿಂಡು ಹಿಂಡಾಗಿ ನುಗ್ಗಿವೆ.
ಇದೇ ಸಮಯಕ್ಕೆ ಸರಿಯಾಗಿ ವೇಗವಾಗಿ ಬಂದ ರೈಲು ಕುರಿಗಳ ಮೇಲೆ ಹರಿದಿದೆ.ಈ ಘಟನೆಯಲ್ಲಿ ರೈಲಿಗೆ ಸಿಕ್ಕಿ 62 ಕುರಿಗಳು ಮತ್ತು 6 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಈ ದೃಶ್ಯ ಕುರಿಗಾಹಿಗಳಿಗೆ ಬರಸಿಡಿಲಿನಂತೆ ಬಡಿದಿದ್ದು ಆಘಾತಕ್ಕೆ ಒಳಗಾದ ಇವರ ರೋಧನೆ ಮುಗಿಲು ಮುಟ್ಟಿತ್ತು.
ಈ ಭೀಕರ ಘಟನೆಯಿಂದಾಗಿ ರೈಲ್ವೆ ಹಳಿಗಳ ಮೇಲೆ ರಾಶಿ ರಾಶಿ ಕುರಿಗಳ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಎಲ್ಲಿ ನೋಡಿದರೂ ರಕ್ತದ ಕಲೆಗಳು ಕಣ್ಣಿಗೆ ರಾಚುತ್ತಿದ್ದವು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ವಿಷಯದ ಕುರಿತಾಗಿ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಉಪನಿರ್ದೇಶಕರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದು, ಕುರಿಗಳು ಸತ್ತಿರುವ ವಿಷಯ ತಿಳಿದೊಡನೆ ಮುಖ್ಯ ಪಶುವೈದ್ಯಾಧಿಕಾರಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಮತ್ತು ರೈಲ್ವೆ ಪೊಲೀಸ್ ಸಿಬ್ಬಂದಿ ಪರಿಶೀಲಿಸಿ ಮಹಜರು ಮಾಡಿದ್ದಾರೆ. ಗಿಡ್ನಹಳ್ಳಿ ಪಶುವೈದ್ಯಾಧಿಕಾರಿ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸರ್ಕಾರದ ಅನುಗ್ರಹ ಯೋಜನೆಯಡಿ(ಸಣ್ಣ ಪ್ರಾಣಿಗಳ ಪರಿಹಾರ ಧನ) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಪ್ರತಿ ಪ್ರಾಣಿಗೆ 5 ಸಾವಿರ ರೂ ಗಳಂತೆ ಪರಿಹಾರವನ್ನು ಕೊಡಿಸುವುದಾಗಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.