Appegowdanahalli, Sidlaghatta : ಟೊಮೆಟೊ ಬೆಳೆಯಲ್ಲಿ ಕೀಟ ಮತ್ತು ರೋಗ ಬಾಧೆ ಹೆಚ್ಚಾಗಿದ್ದು, ಪರಿಸರ ಸ್ನೇಹಿ ಕೀಟ ಮತ್ತು ರೋಗ ಪದ್ದತಿಗಳನ್ನು ಅಳವಡಿಸಿಕೊಂಡು ಉತ್ಪಾದನಾ ವೆಚ್ಚ್ಚವನ್ನು ಕಡಿಮೆ ಮಾಡಬಹುದು ಮತ್ತು ಉತ್ತಮ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ವಿಜ್ಞಾನಿ ಡಾ.ಆರ್.ಪ್ರವೀಣ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಹನುಮಪ್ಪ ಅವರ ತೋಟದಲ್ಲಿ ಗುರುವಾರ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಟೊಮೆಟೊ ಬೆಳೆಯಲ್ಲಿ ಪರಿಸರ ಸ್ನೇಹಿ ಕೀಟ ಮತ್ತು ರೋಗ ನಿರ್ವಹಣೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಟೊಮೆಟೊ ಬೆಳೆಯಲ್ಲಿ ಕೀಟ ನಿರ್ವಹಣೆ ಮಾಡಲು ಜೈವಿಕ ಪದ್ದತಿಗಳು ಮತ್ತು ಮೋಹಕ ಬಲೆಗಳ ಬಗ್ಗೆ ಮಾಹಿತಿ ನೀಡಿದರು.
ಮಣ್ಣು ವಿಜ್ಞಾನಿ ಡಾ. ಕೆ. ಸಂಧ್ಯಾ, ರೈತರು ಟೊಮೆಟೊ ಬೆಳೆಯನ್ನು ಪುನಃ ಪುನಃ ಅದೇ ಭೂಮಿಯಲ್ಲಿ ಬೆಳೆಯುವುದರಿಂದ ಕೀಟ ಮತ್ತು ರೋಗ ಬಾಧೆ ಹೆಚ್ಚಾಗುತ್ತದೆಂದು ಹೇಳಿದರು. ರೈತರು ಅಧಿಕಾರಿಗಳು ಮತ್ತು ವಿಜ್ಞಾನಿಗಳ ಜೊತೆ ಸಂಪರ್ಕದಲ್ಲಿದ್ದು ವೈಜ್ಞಾನಿಕ ಕೃಷಿ ಮಾಡಬೇಕೆಂದು ವಿನಂತಿಸಿಕೊಂಡರು.
ರೋಗಶಾಸ್ತ್ರದ ವಿಜ್ಞಾನಿ ಡಾ. ಬಿ.ಸ್ವಾತಿ ಮಾತನಾಡಿ, ರೈತರು ರಾಸಾಯನಿಕ ಕೀಟನಾಶಕಗಳನ್ನು ಮಾತ್ರ ಬಳಸದೆ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸುಮಾರು 3೦ ಮಂದಿ ರೈತರು ಭಾಗವಹಿಸಿದ್ದರು.