Sidlaghatta : ಬೀಡಿ ಸಿಗರೇಟ್ ಪಾನ್ ಮಸಾಲಾ ಇನ್ನಿತರೆ ಯಾವುದೆ ರೀತಿಯ ತಂಬಾಕು ಪದಾರ್ಥಗಳ ಸೇವನೆ, ಬಳಕೆಯಿಂದ ಕ್ಯಾನ್ಸರ್ ನಂತ ಮಾರಕ ರೋಗಗಳು ನಮ್ಮ ಬದುಕನ್ನು ನಾಶ ಮಾಡುತ್ತವೆ ಎಂದು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ದೇವರಾಜ್ ತಿಳಿಸಿದರು.
ತಂಬಾಕು ನಿಷೇಧ ಕಾರ್ಯಕ್ರಮದಡಿ ಶಿಡ್ಲಘಟ್ಟ ನಗರದ ಹಲವು ಕಡೆ ಮಂಗಳವಾರ ದಾಳಿ ನಡೆಸಿ, ನಿಷೇಧಿತ ಪದಾರ್ಥಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿ, ತಂಬಾಕು ನಿಷೇಧ ಕಾಯಿದೆ ಕುರಿತು ಅರಿವು ಮೂಡಿಸಿ ಅವರು ಮಾತನಾಡಿದರು.
ಶಾಲಾ ಕಾಲೇಜುಗಳ ಸುತ್ತಲೂ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳನ್ನು ಯಾವುದೆ ಕಾರಣಕ್ಕೂ ಮಾರಾಟ ಮಾಡಬಾರದು. ಮಂದಿರ ಮಸೀದಿ ಚರ್ಚ್ ಇನ್ನಿತರೆ ಧಾರ್ಮಿಕ ಕೇಂದ್ರಗಳ ಆಸುಪಾಸಿನಲ್ಲೂ ಮಾರಾಟ ಮಾಡಬಾರದು. ಇತರೆ ಕಡೆ ಮಾರಾಟ ಮಾಡಲು ಅಲ್ಲಿ ಸಾರ್ವಜನಿಕವಾಗಿ ಎಲ್ಲರಿಗೂ ಕಾಣುವಂತೆ ತಂಬಾಕು ಪದಾರ್ಥಗಳ ಬಳಕೆಯಿಂದ ಆಗುವ ಅನಾರೋಗ್ಯ ಸಮಸ್ಯೆಗಳ ಬಗ್ಗೆ ನಾಮ ಫಲಕ ಪ್ರದರ್ಶಿಸಬೇಕು ಎಂದರು.
18 ವರ್ಷದೊಳಗಿನವರಿಗೆ ಮಾರಾಟ ಮಾಡುವುದಿಲ್ಲ ಎಂಬೆಲ್ಲಾ ಮಾಹಿತಿಯನ್ನು ಪ್ರದರ್ಶಿಸಬೇಕು, ಇಲ್ಲವಾದಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
20 ಪ್ರಕರಣಗಳಲ್ಲಿ 1950 ರೂ.ಗಳ ದಂಡ ವಿಧಿಸಲಾಯಿತು. ತಂಬಾಕು ನಿಷೇಧ ಕಾರ್ಯಕ್ರಮ ಕಚೇರಿ ಮೇಲ್ವಿಚಾರಕ ಮಂಜುನಾಥ್, ಆರೋಗ್ಯ ಇಲಾಖೆಯ ಸುನಿಲ್ ಕುಮಾರ್, ಧನಂಜಯ್, ಪೊಲೀಸ್ ಪೇದೆ ಅನಿತ, ನಗರಸಭೆ ಆರೋಗ್ಯ ನಿರೀಕ್ಷಕಿ ಮುಕ್ತಾಂಭ, ಭುವನ್, ಮುನಿಕೃಷ್ಣ ತಂಡದಲ್ಲಿದ್ದರು.