Timmanayakanahalli, Sidlaghatta : ಎಂಟು ಕೋಟಿ ರೂ ವೆಚ್ಚದಲ್ಲಿ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಕೆರೆ ದುರಸ್ತಿ ಕಾಮಗಾರಿ ಅದಷ್ಟು ಶೀಘ್ರ ಪ್ರಾರಂಭವಾಗಲಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕೆಂದು ಅಧಿಕಾರಿಗಳಿಗೆ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಅಗ್ರಹಾರ ಕೆರೆ ದುರಸ್ತಿ ಕಾಮಗಾರಿ ಕುರಿತಂತೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ಪರಿಶೀಲಿಸಿ ಅವರು ಮಾತನಾಡಿದರು.
ಅಗ್ರಹಾರ ಕೆರೆ ದುರಸ್ತಿಯಿಂದಾಗಿ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು ಸ್ಥಳೀಯವಾಗಿ ಸಂಪರ್ಕ ವ್ಯವಸ್ಥೆ ಸಹ ಸುಧಾರಿಸಲಿದೆ.
ನಲ್ಲೋಜನಹಳ್ಳಿ ಕೆರೆ ಸುಮಾರು 53 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ಕಳೆದ ಏಳೆಂಟು ವರ್ಷಗಳಲ್ಲಿ ಹಲವು ಬಾರಿ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯದೇ ಕಟ್ಟೆ ಪದೇ ಪದೇ ಒಡೆದು ಹೋಗಿ ಈ ಭಾಗದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಸುಮಾರು 200 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ಈ ಭಾಗದ ರೈತರು ಇದೇ ನೀರನ್ನು ಅವಲಂಬಿತರಾಗಿ ಕೃಷಿ ಮಾಡುತ್ತಾರೆ. ಕಟ್ಟೆ ಒಡೆದು ರೈತರಿಗೆ ತೊಂದರೆಗಳಾಗಿದೆ.
ಇದೀಗ ಅಧಿಕಾರಿಗಳು ಕೆರೆ ಕಟ್ಟೆಯನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಗುಣಮಟ್ಟದಲ್ಲಿ ರಾಜಿ ಆಗದೆ ಕಟ್ಟೆ ಪುನರ್ ನಿರ್ಮಾಣ ಮಾಡುವ ಮೂಲಕ ಈ ಭಾಗದ ರೈತರ ಹಿತ ಕಾಪಾಡಬೇಕಿದೆ ಎಂದರು.
ಎಂಟು ಕೋಟಿ ವೆಚ್ಚದಲ್ಲಿ ಅಗ್ರಹಾರ ಕೆರೆ ಕಟ್ಟೆ ದುರಸ್ತಿ, ಆನೆಮಡುಗು ಮತ್ತು ದಡಂಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಅಗ್ರಹಾರ ಕೆರೆ ಮತ್ತು ಇದಕ್ಕೆ ಹೊಂದಿಕೊಂಡಂತೆ ಇರುವ ಗೊರ್ಲಗುಮ್ಮನಹಳ್ಳಿ ಕೆರೆ ಏರಿ ಮೇಲಿನ ಐದು ಮೀಟರ್ ರಸ್ತೆ ಕಾಮಗಾರಿ ನಡೆಸಲಾಗುವುದು. ಈ ರಸ್ತೆಯಲ್ಲಿ ಮೂರು ಕೋಡಿ ಮರವೆಗಳು ಬರುತ್ತವೆ. ಈ ಕೆರೆಕಟ್ಟೆಯ ಸುತ್ತಮುತ್ತಲಿನ ಮಣ್ಣು ಗುಣಮಟ್ಟ ಸರಿಯಿರದ ಕಾರಣ, ಬೇರೆಡೆಯಿಂದ ಗುಣಮಟ್ಟದ ಮಣ್ಣು ತಂದು ಕಾಮಗಾರಿ ನಡೆಸಬೇಕಿದೆ. ಶಾಶ್ವತವಾಗಿ ಉಳಿಯುವ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಚ ವಿಜಯ ಭಾವರೆಡ್ಡಿ, ಮುಖಂಡರಾದ ತಾದುರು ರಘು, ಕೆ.ಎಸ್. ಮಂಜುನಾಥ್ , ಆನೆಮಡಗು ದೇವರಾಜ್ , ಜಿ.ವಿ.ಕೆ. ಮುನಿಯಪ್ಪ , ಚಿಕ್ಕವೆಂಕಟರಾಯಪ್ಪ, ವೇಣು, ಬೈರಾರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಚೇತನ್ , ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಹಾಗು ಸ್ಥಳೀಯ ರೈತರು ಹಾಜರಿದ್ದರು.