ಚಿಕ್ಕಬಳ್ಳಾಪುರ: ಶಿಕ್ಷಕರಾದವರು ಎಂದಿಗೂ ಕಲಿಕೆ ನಿಲ್ಲಿಸಬಾರದು, ಹುಟ್ಟಿನಿಂದ ಸಾವಿನ ವರೆಗೂ ಕಲಿಕೆ ಬಹಳ ಮುಖ್ಯ. ಪೀಳಿಗೆಗೆ ತಕ್ಕಂತೆ ಶಿಕ್ಷಣದ ಪದ್ಧತಿ ಬದಲಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರೇರಣಾ ಶಕ್ತಿಯಾಗಬೇಕು. ಪೋಷಕರ ನಂತರ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಜಿಲ್ಲಾಡಳಿ ಭವನದ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಶಿಕ್ಷಕರು ಕಲಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು ಮಕ್ಕಳ ಕಲಿಕೆಗೆ ಉತ್ಸಾಹ ತುಂಬಬೇಕು. ಶಿಕ್ಷಕನಿಗೆ ನಿವೃತ್ತಿ ಇರುವುದಿಲ್ಲ. ಕಲಿಕೆಯಲ್ಲಿ ಶಿಕ್ಷಕರು ಉತ್ಸಾಹ ದಿಂದ ತೊಡಗಿಕೊಂಡು, ಮಕ್ಕಳಿಗೆ ಪ್ರೀತಿ ವಾತ್ಸಲ್ಯ ದಿಂದ ಬೋಧನೆ ಮಾಡಬೇಕು. ಆತ್ಮ ಸಾಕ್ಷಿಗೆ ಕೊಡುವಂತಹ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಪೋಷಕರ ಸ್ಥಾನವನ್ನು ಶಿಕ್ಷಕರು ತುಂಬುತ್ತಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿರುವ ಜಾತಿ ಪದ್ದತಿ, ಅಜ್ಞಾನ, ಬ್ರಷ್ಟಾಚಾರವನ್ನು ತೊಡೆದುಹಾಕಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಒಬ್ಬ ವ್ಯಕ್ತಿಯು ಸಂಪೂರ್ಣ ವಿಕಾಸ ಮಾಡುವಂತಹ ಜವಾಬ್ದಾರಿ. ಅನಾದಿ ಕಾಲದಿಂದಲೂ ಗುರುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸರಕಾರಿ ಶಾಲೆಗಳನ್ನು ಶಾಸಕರು, ಮಂತ್ರಿಗಳು, ಐಟಿ ಬಿಟಿ ಕಂಪನಿಗಳು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲು ಒಪ್ಪಿರುವುದು ಸ್ವಾಗತಾರ್ಹ. ಕೋವಿಡ್-೧೯ ತುರ್ತು ಸಂದರ್ಭದಲ್ಲಿ ವೈದ್ಯರು, ಶಿಕ್ಷಕರು, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸಮಾಜಕ್ಕೆ ಅಪಾರವಾದ ಸೇವೆಯನ್ನು ನೀಡಿರುವುದು ಸ್ಮರಿಸಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತು ಸೇವನೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಕಾರ‍್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷ ನಿರ್ಮಲಾ ಮುನಿರಾಜು, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಜಿಲ್ಲಾಧಿಕಾರಿ ಆರ್ ಲತಾ, ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಎಸ್ಪಿ ಜಿ.ಕೆ ಮಿಥುನ್ ಕುಮಾರ್, ಡಿಡಿಪಿಐ ಎಸ್. ನಾಗೇಶ್ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi