ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಂತರಾಮ್ ಮಾತನಾಡಿದರು.
ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಯ ಕಲೆಗಾರಿಕೆ ಕೆಲಸವು ವಿಶ್ವವೇ ಮೆಚ್ಚುವಂತೆ ಮಾಡಿದೆ ಎಂದು ಅವರು ತಿಳಿಸಿದರು.
ವಿಷ್ಣುವರ್ಧನನ ಹೆಂಡತಿ ಶಾಂತಲೆ ನಾಟ್ಯ ರಾಣಿ ಎಂದು ಪ್ರಸಿದ್ಧಿಯಾಗಿದ್ದಳು. ಆ ಕಾಲಘಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಬೇಲೂರು ಮತ್ತು ಹಳೆಬೀಡಿನ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ. ಅವರು ಇಡೀ ಜೀವನವನ್ನು ಶಿಲ್ಪ ಕಲೆಗೆ ಮೀಸಲಿಟ್ಟರು. ಅವರ ಮಗ ಡಕಣಾಚಾರಿ ಸಹ ಶಿಲ್ಪಿಯಾಗಿದ್ದು, ಚನ್ನಿಗರಾಯ ದೇವಸ್ಥಾನವನ್ನು ಅದ್ಭುತ ಕಲಾ ಕೃತಿಯಿಂದ ನಿರ್ಮಿಸಿದ್ದಾರೆ ಎಂದು ವಿವರಿಸಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಕೆಲವೊಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ. ಅವರು ಜಗತ್ತಿನ ಮಹಾನ್ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅಂತಹ ಚೇತನಕ್ಕೆ ಸರ್ಕಾರದಿಂದ ಸಂಸ್ಮರಣೋತ್ಸವ ನಡೆಸುವ ಕಾರ್ಯವನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್, ಮುನಿರತ್ನಾಚಾರಿ, ಕೃಷ್ಣಾಚಾರಿ, ಶಿವಶಂಕರಾಚಾರಿ, ಸುಬ್ರಮಣ್ಯಾಚಾರಿ, ಮಂಜುನಾಥ್ ಹಾಜರಿದ್ದರು.