ಯುವಕರು ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯ ಪಡೆಯಲು ಕ್ರೀಡೆಗಳು ಜೀವನದಲ್ಲಿ ಬಹಳ ಅವಶ್ಯಕ. ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಎಬಿಡಿ ಗ್ರೂಪ್ ವತಿಯಿಂದ ಆಯೋಜಿಸಿರುವ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಮೊದಲ ಹಂತದ ಹೋಬಳಿವಾರು ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ನಾವು ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿದ್ದೇವೆ. ಈ ಪ್ರೋತ್ಸಾಹದಿಂದ ನಮ್ಮ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಯಾರಾದರೂ ಒಬ್ಬರಾದರೂ ಆಯ್ಕೆ ಆಗಬೇಕು ಅನ್ನುವುದು ನಮ್ಮ ಉದ್ದೇಶ. ಈಗ ತಾಲ್ಲೂಕು ಮಟ್ಟದಲ್ಲಿ ಪಂದ್ಯಾವಳಿಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಟೂರ್ನಮೆಂಟ್ ಸಹ ಆಯೋಜನೆ ಮಾಡುತ್ತೇವೆ. ಹೋಬಳಿ ಮಟ್ಟದ ಟೂರ್ನಮೆಂಟನ್ನು ಮೊದಲ ಬಾರಿಗೆ ಜಂಗಮಕೋಟೆಯಿಂದ ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ಹಲವಾರು ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಗುರಿಯನ್ನು ಯುವಕರು ಹೊಂದಿರಬೇಕು. ವಿದ್ಯಾರ್ಥಿಗಳು ಓದದೇ ಅನುತ್ತೀರ್ಣಗೊಂಡು, ಅರ್ಧಕ್ಕೆ ಶಿಕ್ಷಣ ಬಿಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಭ್ಯಾಸದ ಅವಧಿಯಲ್ಲಿ ಉತ್ತಮವಾಗಿ ಓದಬೇಕು. ನವಸಮಾಜ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಯುವಕರು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆಗಳಲ್ಲಿ ಹಾಗೂ ಆಟೋಟಗಳಲ್ಲಿ ಪ್ರದರ್ಶನ ಮಾಡಬೇಕು. ತಾಲ್ಲೂಕು ಅತಿ ಹಿಂದುಳಿದ, ಗಡಿ ಪ್ರದೇಶವಾಗಿದೆ. ಇಲ್ಲಿನ ಕೆಲ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅನೇಕ ಮಹನೀಯರ, ಸಾಧಕರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದರು.
ಕ್ರಿಕೆಟ್ ಪಂದ್ಯವಳಿಯಲ್ಲಿ ತಾಲ್ಲೂಲು ಮಟ್ಟದ ಪ್ರಥಮ ಬಹುಮಾನ ಐದು ಲಕ್ಷ, ಹೋಬಳಿ ಮಟ್ಟದ ಪ್ರಥಮ ಬಹುಮಾನ ಐವತ್ತು ಸಾವಿರ ಬಹುಮಾನ ನೀಡುತ್ತಿದ್ದು, ಕ್ರಿಕೆಟ್ ಪಂದ್ಯವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗು ಸಮಾನಕರ ಬಹುಮಾನ ವಿತರಣೆ ಮಾಡುತ್ತೇವೆ ಎಂದರು.
ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಹಿರಿಯರಾದ ವರದಣ್ಣ, ಫಯಾಜ್, ನಯೀಮ್, ನಾರಾಯಣಸ್ವಾಮಿ(ಬಂಗಾರಪ್ಪ), ಎಣ್ಣೂರು ಮಂಜಣ್ಣ, ಹಿರೇಬಲ್ಲ ಕೃಷ್ಣಪ್ಪ, ಜಂಗಮಕೋಟೆ ಚಂದ್ರಣ್ಣ, ಹರೀಶ್, ಅಪ್ಪೆಗೌಡನಹಳ್ಳಿ ಮಂಜುನಾಥ್, ಮುನಿರಾಜು(ಕುಟ್ಟಿ ), ಆನೂರು ರವಿ, ಸುದರ್ಶನ್ ಗೌಡ, ನರೇಂದ್ರ, ಹಾಜರಿದ್ದರು.