Sidlaghatta : ತಾಲ್ಲೂಕಿನ ಇತಿಹಾಸ ಪ್ರಸಿದ್ದ ತಲಕಾಯಲಬೆಟ್ಟದಲ್ಲಿ ಇದೇ ಫೆ.24 ರ ಶನಿವಾರ ನಡೆಯಲಿರುವ ಶ್ರೀಭೂನೀಳಾ ಸಮೇತ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿಯ ಶ್ರೀಮತ್ಕಲ್ಯಾಣ ಬ್ರಹ್ಮರಥೋತ್ಸವದಂದು ಎಲ್ಲ ವಾಹನ ಮತ್ತು ರಾಸುಗಳ ಪ್ರವೇಶ ಶುಲ್ಕವನ್ನು ನಮ್ಮ ಶ್ರೀಬಾಲಾಜಿ ಸೇವಾ ಟ್ರಸ್ಟ್‌ನಿಂದ ಭರಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ, ಬಿಜೆಪಿ ಮುಖಂಡರೂ ಆದ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪುರಾಣ ಪ್ರಸಿದ್ದಿಯಾದ ತಲಕಾಯಲಬೆಟ್ಟದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲ್ಲದೆ ನೆರೆಯ ಆಂಧ್ರದಿಂದಲೂ ರಾಸುಗಳು ಹಾಗೂ ಭಕ್ತರು ಆಗಮಿಸುತ್ತಾರೆ. ಎಲ್ಲ ರೀತಿಯ ವಾಹನಗಳು, ರಾಸುಗಳ ಪ್ರವೇಶ ಶುಲ್ಕವನ್ನು ಉಚಿತಗೊಳಿಸಲಾಗಿದೆ ಎಂದರು.
ನಮ್ಮ ಶ್ರೀ ಬಾಲಾಜಿ ಸೇವಾ ಟ್ರಸ್ಟ್‌ನಿಂದ ವಾಹನ ಮತ್ತು ರಾಸುಗಳ ಪ್ರವೇಶ ಶುಲ್ಕವನ್ನು ದೇವಾಲಯದ ಸಮಿತಿಗೆ ಮುಂಗಡವಾಗಿಯೆ ಪಾವತಿಸಿದ್ದು ಪರಿಷೆಗೆ ಬರುವ ಎಲ್ಲ ರಾಸುಗಳ ರೈತರು, ಭಕ್ತರು ತಮ್ಮ ವಾಹನಗಳಿಗೆ ಯಾವುದೆ ರೀತಿಯ ಶುಲ್ಕವನ್ನು ಪಾವತಿಸಬೇಡಿ.
ನಾಡಿನಲ್ಲಿ ಇದೀಗ ಬರಗಾಲ ಬೀಡು ಬಿಟ್ಟಿದೆ. ಅದರಲ್ಲೂ ರೈತರು ಸಂಕಷ್ಟದಲ್ಲಿದ್ದಾರೆ. ಸಾವಿರಾರು ಮಂದಿ ಭಕ್ತರು ಭಗವಂತನ ದರ್ಶನಕ್ಕಾಗಿ ಬರಲಿದ್ದು ಅವರೆಲ್ಲರಿಗೂ ಸಣ್ಣ ಸಹಾಯ ಆಗಲಿ ಎಂದು ಈ ಪ್ರವೇಶವನ್ನು ಉಚಿತಗೊಳಿಸಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ, ಭಗವಂತನ ಆಶೀರ್ವಾದ ಎಲ್ಲರ ಮೇಲಿದ್ದು ಈ ವರ್ಷವಾದರೂ ಕಾಲ ಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದರು.