Sidlaghatta : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ರಾಷ್ಟ್ರವ್ಯಾಪಿ “ಸ್ವಚ್ಛ ಮಂದಿರ” ಅಭಿಯಾನ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ನಗರದ ಸಂತೆ ಮೈದಾನದಲ್ಲಿರುವ ಆಂಜನೇಯಸ್ವಾಮಿ ದೇವಾಲಯದ ಸುತ್ತ ಸ್ವಚ್ಛತಾ ಕಾರ್ಯವನ್ನು ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಬಿ.ಜೆ.ಪಿ ಸದಸ್ಯರು ಭಾನುವಾರ ಕೈಗೊಂಡರು.
ದೇವಾಲಯಗಳ ಸ್ವಚ್ಛತೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಮುನಿಸ್ವಾಮಿ, “ಶ್ರೀರಾಮ ದೇಶದ ಎಲ್ಲ ಧರ್ಮೀಯರಿಗೂ ದೇವರು. ಶ್ರೀರಾಮನು ಬರುವಾಗ ಎಲ್ಲ ದೇವಾಲಯಗಳೂ ಶುಚಿಯಾಗಿ, ಪರಿಶುದ್ಧವಾಗಿರಬೇಕು ಎಂಬ ಪ್ರಧಾನಿಯವರ ಸದಾಶಯ ಅನುಕರಣೀಯ. ಜನವರಿ 22 ರ ಹೊತ್ತಿಗೆ ನಮ್ಮ ಸುತ್ತಮುತ್ತಲಿನ ದೇವಾಲಯಗಳನ್ನು ಸ್ವಚ್ಚವಾಗಿಟ್ಟುಕೊಳ್ಳೋಣ. ಇದರಲ್ಲಿ ರಾಜಕೀಯವಿಲ್ಲ, ಕೇವಲ ಶ್ರದ್ಧೆ, ಆಸ್ತೆ, ಸಂಸ್ಕಾರ ಮಾತ್ರವಿದೆ. ಜಾತಿ ಮತ್ತು ಧರ್ಮದ ಭೇದವಿಲ್ಲದೆ ಜನವರಿ 22 ರಂದು ಪ್ರತಿಯೊಬ್ಬ ಭಾರತೀಯರು ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸೋಣ” ಎಂದು ಹೇಳಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಶಿಡ್ಲಘಟ್ಟದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ 15 ನೇ ಶತಮಾನದಲ್ಲಿ ಗೌಡನಕೆರೆ ನಿರ್ಮಿಸಿದಾಗ ಈ ಆಂಜನೇಯಸ್ವಾಮಿಯ ದೇವಸ್ಥಾನವನ್ನು ಕಟ್ಟಿಸಿರುವರೆಂಬ ಪ್ರತೀತಿಯಿದೆ. ಬಾಲಾಂಜನೇಯ ಸ್ವರೂಪಿಯಾಗಿ ಆಗ್ನೇಯ ದಿಕ್ಕಿಗೆ ನೋಡುವ ದೇವರ ವಿಗ್ರಹ ಇಲ್ಲಿನ ವಿಶೇಷ. ಈ ಪುರಾತನ ದೇವಾಲಯದಿಂದ ಪ್ರಾರಂಭವಾಗಿ ತಾಲ್ಲೂಕಿನ ಎಲ್ಲಾ ದೇವಾಲಯಗಳಲ್ಲೂ ಸ್ವಚ್ಛತೆ ಕಾರ್ಯ ನಡೆಯುತ್ತದೆ. ಸಾರ್ವಜನಿಕರು ಈ ಒಳ್ಳೆಯ ಕೆಲಸದಲ್ಲಿ ಭಾಗಿಯಾಗಬೇಕು” ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಸೀಕಲ್ ಆನಂದಗೌಡ, ನಗರಸಭಾ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.