Sidlaghatta : ಪ್ರಜಾಪ್ರಭುತ್ವದ ಮೂಲ ನೆಲೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಮತ್ತು ಕಡ್ಡಾಯವಾಗಿ ಭಾಗವಹಿಸಿ ಮತದಾನ ಮಾಡುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಜಿ. ಮುನಿರಾಜ ತಿಳಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸೆಲ್ಫಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ವ್ಯವಸ್ಥೆಯನ್ನು ಬಲಿಷ್ಠ ಗೊಳಿಸಬೇಕು. 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಕಡ್ಡಾಯವಾಗಿ ತಮ್ಮ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಸಂವಿಧಾನಾತ್ಮಕವಾಗಿ ದೊರೆತಿರುವ ಹಕ್ಕನ್ನು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕೆಂದರು.
ಮತದಾನ ಅಮೂಲ್ಯವಾಗಿದ್ದು ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ವಿಶೇಷವಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಎಂ. ಎಚ್. ಆದಿನಾರಾಯಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಾಥ್ ರೆಡ್ಡಿ, ನಗರಸಭೆಯ ಪ್ರಭಾರ ಪೌರಾಯುಕ್ತ ರಘುನಾಥ್ ಎಂಎಸ್, ಸಿ.ಆರ್. ಪಿ. ಪರಿಮಳ, ಬೆಸ್ಕಾಂ ನಗರ ವಿಭಾಗದ ಎ ಇ ಇ ಶಿವ ಪ್ರಸಾದ್, ಕಾರ್ಮಿಕ ಇಲಾಖೆಯ ನಿರೀಕ್ಷಕಿ ವಿಜಯ ಲಕ್ಷ್ಮಿ ಹಾಜರಿದ್ದರು.