ಶಿಡ್ಲಘಟ್ಟ ತಾಲ್ಲೂಕಿನ ಗೌಡನ ಹಳ್ಳಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ “ಚಿತ್ತಾರ” ಎಂಬ ಒಂದು ವಾರದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿ ರಘುನಾಥರೆಡ್ಡಿ ಅವರು ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳಿಲ್ಲಿ ಹಿನ್ನಡೆಯಾಗಿತ್ತು. ಈಗೀಗ ಶಾಲೆಗಳು ಮಕ್ಕಳ ಕಲರವದಿಂದ ಗರಿಗೆದರುತ್ತಿರುವ ವೇಳೆಗೆ ಗೌಡನ ಹಳ್ಳಿ ಶಾಲೆಯಲ್ಲಿ ಚಿತ್ತಾರ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿರುವುದು ಅಭಿನಂದನಾರ್ಹ. ನಶಿಸಿ ಹೋಗುತ್ತಿರುವ ದೇಸೀಯ ಆಟಗಳಿಗೆ ಮರು ಜೀವ ತುಂಬುವಂತ ಕೆಲಸ ಈ ಶಿಬಿರದಲ್ಲಿ ಆಗುತ್ತಿರುವುದು ತುಂಬಾ ಸಂತೋಷ ಎಂದು ಅವರು ತಿಳಿಸಿದರು.
ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲ ಬಗೆಯ ಮಕ್ಕಳೊಂದಿಗೆ ಕಲೆತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿ, ಗ್ರಾಮೀಣ ಆಟಗಳಾದ ಕುಂಟೇಬಿಲ್ಲೆ, ಅಳಗುಣಿಮಣೆ, ಮರ ಕೋತಿ ಆಟ, ಕಲ್ಲೋ ಮಣ್ಣೋ, ಕಣ್ಣಾ ಮುಚ್ಚಾಲೆ ಆಟಗಳನ್ನು ಆಡಿ ನಮ್ಮ ಬಾಲ್ಯದ ದಿನಗಳನ್ನು ನೆನಪಿಗೆ ತರುವ ಕೆಲಸ ಈ ಮಕ್ಕಳು ಮಾಡಿದ್ದಾರೆಂದು ನುಡಿದರು.
ಬಿ ಆರ್ ಪಿ ಲಕ್ಷ್ಮೀ ನಾರಾಯಣ, ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮೀಪತಿ, ಸದಸ್ಯರಾದ ವಿ ವೆಂಕಟರೆಡ್ಡಿ, ವೆಂಕಟಶಿವ, ಸತ್ಯ ನಾರಾಯಣ, ನರಸಿಂಹಮೂರ್ತಿ, ರಾಮಕೃಷ್ಣಪ್ಪ, ಗಂಗರಾಜ್, ಯುವಕ ಸಂಘದ ಅಧ್ಯಕ್ಷ ಚಂದ್ರು, ಮುಖ್ಯ ಶಿಕ್ಷಕ ಎಂ.ದೇವರಾಜ, ಶಿಕ್ಷಕರಾದ ವಿ.ಎಂ.ಮಂಜುನಾಥ್, ವಿ.ಎನ್.ಗಜೇಂದ್ರ ಹಾಜರಿದ್ದರು.