Sugaturu, Sidlaghatta : ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕಾಂಶಯುತವೂ, ಆಮ್ಲಕಾರಕವಲ್ಲದವೂ, ನಾರಿನ ಅಂಶವನ್ನು ಯಥೇಚ್ಛವಾಗಿ ಹೊಂದಿರುವ ಆಹಾರ ಪದಾರ್ಥಗಳಾಗಿದ್ದು, ಆಹಾರಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಅವುಗಳ ಉತ್ಪಾದನೆಯ ಬಗ್ಗೆ ಅರಿವು ಹೆಚ್ಚಿಸಬೇಕಿದೆ ಎಂದು ತಾಲ್ಲೂಕು ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನೆಹರು ಯುವಕೇಂದ್ರ, ರೋಟರಿ ವಿಜಯಪುರ, ರಾಷ್ಟ್ರೀಯ ಸೇವಾಯೋಜನಾ ಘಟಕಗಳ ಆಶ್ರಯದಲ್ಲಿ ಮಿಶನ್ ಲೈಫ್- ಲೈಫ್‌ಸ್ಟೈಲ್ ಫಾರ್ ಲೈಫ್ ಯೋಜನೆಯಡಿ ಹಮ್ಮಿಕೊಂಡಿದ್ದ ಸಿರಿಧಾನ್ಯ ಆಹಾರಮೇಳ, ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿರಿಧಾನ್ಯಗಳಲ್ಲಿರುವ ಗುಣಲಕ್ಷಣಗಳು ಹಿತವಾಗಿ ಜೀರ್ಣಿಸಿಕೊಳ್ಳಲು ಸುಲಭವಾಗಿಸುತ್ತವೆ. ರುಚಿಕರವಾದ ಭಕ್ಷ್ಯಗಳ ತಯಾರಿಸಲು ಸೂಕ್ತವಾಗಿದ್ದು, ದೈನಂದಿನ ಆಹಾರದಲ್ಲಿ ಹೆಚ್ಚೆಚ್ಚು ಬಳಸಿಕೊಳ್ಳಬಹುದಾಗಿವೆ. ಸಿರಿಧಾನ್ಯಗಳಿಂದಾಗುವ ಆರೋಗ್ಯ ಉಪಯೋಗಗಳ ಬಗ್ಗೆ ಮಕ್ಕಳದಿಸೆಯಿಂದಲೇ ಜಾಗೃತಿ ಮೂಡಿಸಬೇಕು ಎಂದರು.
ರೋಟರಿ ಅಧ್ಯಕ್ಷ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕಿರುಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ಅಮೈನೋಆಮ್ಲಗಳು, ವಿಟಮಿನ್‌ಗಳು, ಖನಿಜಾಂಶಗಳು ಇರುವುದರಿಂದ ನೈಸರ್ಗಿಕವಾಗಿ ಅಲರ್ಜಿರಹಿತವೂ, ಗ್ಲುಟೆನ್‌ಮುಕ್ತವೂ ಆಗಿವೆ. ದೇಹದಲ್ಲಿನ ಕೊಲೆಸ್ಟರಾಲ್ ಕಡಿಮೆ ಮಾಡಿ, ಮಧುಮೇಹ ತಡೆಯಲು, ತೂಕ ಇಳಿಕೆಗೆ ಉಪಯೋಗಕಾರಿ. ಬಂಜೆತನ ನಿವಾರಣೆ, ನರದೌರ್ಬಲ್ಯ ತಡೆ, ರಕ್ಯಶುದ್ಧೀಕರಣ, ಸರಿಯಾದ ಪಚನಾಂಗಕ್ರಿಯೆಗೆ ಅನುಕೂಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ಸಿಆರ್‌ಪಿ ಎಂ.ರಮೇಶ್‌ಕುಮಾರ್ ಮಾತನಾಡಿ, ಜೀವನ ಸಂಬಂಧಿ ಶೈಲಿ ಕಾಯಿಲೆಗಳು ಇಂದು ಎಲ್ಲರಿಗೂ ಕಾಡುತ್ತಿದ್ದು ತಡೆಯಲು ಸಿರಿಧಾನ್ಯಗಳು ಸಹಕಾರಿ. ಹಸಿರುಕ್ರಾಂತಿಯ ಪರಿಣಾಮವಾಗಿ ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಅಕ್ಕಿ, ಗೋಧಿಯ ಉತ್ಪಾದನೆಗೆ ಉತ್ತೇಜನ ಸಿಕ್ಕಿತು. ಇತ್ತೀಚಿನ ದಿನಗಳಲ್ಲಿ ಸಾವಯವಕೃಷಿ, ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆ, ಸಿರಿಧಾನ್ಯಗಳ ಬಳಕೆ ಬಗ್ಗೆ ಉತ್ತೇಜನ ಸಿಗುತ್ತಿದ್ದು ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಬೇಕು ಎಂದರು.
ಸಹಾಯಕ ನಿರ್ದೇಶಕ ಆಂಜನೇಯ, ಸಿಆರ್‌ಪಿ ರಮೇಶ್‌ಕುಮಾರ್ ಅವರಿಗೆ ಅಭಿನಂದನಾಪತ್ರ ನೀಡಿ ಗೌರವಿಸಲಾಯಿತು. ನಂತರ ನಡೆದ ಸಿರಿಧಾನ್ಯ ಪ್ರದರ್ಶನದಲ್ಲಿ ಶಾಲಾಮಕ್ಕಳಿಗೆ ಪ್ರತಿ ಸಿರಿಧಾನ್ಯದ ಬಗ್ಗೆ ವಿವರಿಸಲಾಯಿತು. ಸಿರಿಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಿರಿಧಾನ್ಯಗಳ ಚಿತ್ರವಿವರಣೆಯುಳ್ಳ ಪಟಗಳನ್ನು ಬಿಡುಗಡೆ ಮಾಡಲಾಯಿತು.
ನೆಹರು ಯುವಕೇಂದ್ರದ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ್, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕಿ ತಾಜೂನ್, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಜಯಂತಿ, ಅಕ್ಷರದಾಸೋಹ ಯೋಜನೆಯ ನಾರಾಯಣಮ್ಮ, ಭಾಗ್ಯಮ್ಮ, ಪೋಷಕರಾದ ಸತೀಶ್, ಸರಸ್ವತಿ, ಹಾಜರಿದ್ದರು.