ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಗಳು ಜಿಲ್ಲಾ ಮಟ್ಟದ ಅತ್ಯುತ್ತಮ ಇಕೋಕ್ಲಬ್ ಪ್ರಶಸ್ತಿಗೆ ಭಾಜನವಾಗಿವೆ
ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಎನ್ವಿರಾನ್‌ಮೆಂಟಲ್ ಮ್ಯಾನೇಜ್‌ಮೆಂಟ್ ಅಂಡ್ ಪಾಲಿಸಿ ರೀಸರ್ಚ್ ಇನ್ಸ್ಟಿಟ್ಯೂಟ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹಸಿರು ಪಡೆ ಯೋಜನೆಯಡಿ ಶಾಲಾ ಇಕೋಕ್ಲಬ್ ಮೂಲಕ ನಡೆಸಿದ ವಾರ್ಷಿಕ ಕಾರ್ಯಚಟುವಟಿಕೆಗಳ ಜಿಲ್ಲಾ ಅನುಷ್ಟಾನ ಮೇಲ್ವಿಚಾರಣಾ ಸಮಿತಿಯ ಸಭೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಜಿಲ್ಲಾಧಿಕಾರಿ ಆರ್.ಲತಾ, ಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಡಿವೈಎಸ್‌ಪಿ ಡಿ.ಎನ್.ಸುಕನ್ಯಾ ಅವರು ಪ್ರಧಾನ ಮಾಡಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗ್ರಾಮಸ್ಥರಿಗೆ ಉಚಿತ ಸಸಿ ವಿತರಣೆ, ಕೊರೊನಾ ಆರೋಗ್ಯ ತಪಾಸಣೆ, ಸಸಿ ನೆಡುವ ಕಾರ್ಯಕ್ರಮ, ಆನ್‌ಲೈನ್ ಜಾಗೃತಿ ವೆಬಿನಾರ್ ಕಾರ್ಯಕ್ರಮ, ಓಜೋನ್ ದಿನಾಚರಣೆ, ಶ್ರಮದಾನಶಿಬಿರ, ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಅರಿವು, ಅಪೌಷ್ಟಿಕತೆ ಹೋಗಲಾಡಿಸುವ ಮಾರ್ಗಗಳ ಕುರಿತ ಸ್ಪರ್ಧೆಗಳು, ಕೈತೊಳೆಯುವ ದಿನಾಚರಣೆ, ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ, ಪರಿಸರ ಸ್ನೇಹಿ ದೀಪಾವಳಿ ಆಚರಣೆ ಜಾಗೃತಿ, ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ, ಕೊರೊನಾ ಜಾಗೃತಿ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಲ್ಪತರು ದಿನಾಚರಣೆ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಸಸಿಗಳ ವಿತರಣೆ, ಪರಿಸರ ಜಾಗೃತಿ ಕಾರ್ಯಕ್ರಮ, ವಿಜ್ಞಾನ ದಿನಾಚರಣೆ, ಜಲಸಂರಕ್ಷಣೆ ತಿಳುವಳಿಕೆಗಾಗಿ ಹೊರಸಂಚಾರ, ಉಪನ್ಯಾಸ ಕಾರ್ಯಕ್ರಮ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಟ್ಟದ ಶ್ರಮದಾನಶಿಬಿರ, ಗ್ರಾಮಪಂಚಾಯಿತಿಯೊಂದಿಗೆ ಪ್ಲಾಸ್ಟಿಕ್ ವರ್ಜನೆ ಕುರಿತ ಜಾಗೃತಿಯಂತಹ ಕಾರ್ಯಕ್ರಮಗಳನ್ನು ನಡೆಸಿರುವುದನ್ನು ಜಿಲ್ಲಾಧಿಕಾರಿ ಆರ್.ಲತಾ ಮುಕ್ತಕಂಠದಿಂದ ಶ್ಲಾಘಿಸಿದರು.
ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಲಭ್ಯಸಂಪನ್ಮೂಲಗಳನ್ನು ಬಳಸಿಕೊಂಡು ಶಾಲಾ ಆವರಣವನ್ನು ಹಸಿರುಮಯವಾಗಿಸಿರುವುದಲ್ಲದೇ ವಿದ್ಯಾರ್ಥಿಗಳಲ್ಲಿ ಪರಿಸರಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾದರಿ ಶಾಲೆಗಳಿಗೆ ಮತ್ತೊಂದು ಗರಿ: ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಗಳು ಮಾದರಿ ಶಾಲೆಗಳಾಗಿದ್ದು, ಉತ್ತಮ ಇಕೋಕ್ಲಬ್ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿರುವುದು ಮಾದರಿ ಶಾಲೆಗಳಿಗೆ ಮತ್ತೊಂದು ಗರಿ ಬಂದಂತಾಗಿದೆ.
ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ಶಾಲೆಯ ಇಕೋಕ್ಲಬ್ ಚಟುವಟಿಕೆಗಳ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಪಿಪಿಟಿ ರೂಪದಲ್ಲಿ ಮೇಲ್ವಿಚಾರಣಾ ಸಭೆಯಲ್ಲಿ ಮಂಡಿಸಿದರು.
ಬಿಆರ್‌ಸಿ ಸಮನ್ವಯಾಧಿಕಾರಿ ತ್ಯಾಗರಾಜು, ಬಿಆರ್‌ಪಿ ನೇತ್ರಾ, ಜಿಲ್ಲಾ ಅನುಷ್ಟಾನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.