ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶ, ನಗರಸಭೆ ಹಾಗೂ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಆತ್ಮನಿರ್ಭರ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಡಿಜಿಟಲ್ ವಹಿವಾಟು ಹಾಗೂ ಸಾಲ ಸೌಲಭ್ಯದ ಬಗ್ಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೋಶದ ಸಮುದಾಯ ಸಂಘಟನಾ ತಜ್ಞ ವೆಂಕಟಾಚಲಪತಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಕಿರುಸಾಲ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ ಡೇ-ನಲ್ಮ್ ಯೋಜನೆಯಡಿ ಬೀದಿ ಬದಿ ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಅನೇಕ ಸೌಕರ್ಯಗಳನ್ನು ಮಾಡಿಕೊಡುತ್ತಿದೆ. ಸಣ್ಣ ವ್ಯಾಪಾರಸ್ಥರು ಮತ್ತಷ್ಟು ಜಾಗೃತರಾಗುವ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಉಪಯೋಗ ಪಡೆದುಕೊಂಡು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದರು.
ಲೀಡ್ ಬ್ಯಾಂಕ್ ಮೇನೇಜರ್ ಜಂಗಮಪ್ಪ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಪ್ರಧಾನಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿ ವ್ಯಾಪಾರ ವಹಿವಾಟು ಆರಂಭಿಸಲು ಪಡೆದ ಸಾಲವನ್ನು ಒಂದು ವರ್ಷದೊಳಗೆ ಮರುಪಾವತಿ ಮಾಡಿದಲ್ಲಿ ಹೆಚ್ಚಿನ ಬಡ್ಡಿ ವಿನಾಯಿತಿ ಸಿಗಲಿದೆ ಎಂದರು.
ಕೋವಿಡ್ ನಿಂದ ದೇಶಾಧ್ಯಂತ ಲಾಕ್ ಡೌನ್ ಜಾರಿಯಾದಾಗ ಬಹಳಷ್ಟು ಬೀದಿ ಬದಿ ವ್ಯಾಪಾರಿಗಳು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಹಾಗಾಗಿ ವ್ಯಾಪಾರ ಮಾಡಲು ಬೇಕಾದ ಕಿರುಸಾಲವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ್, ಫೀಲ್ಡ್ ಆಫೀಸರ್ ಶಮಂತ್, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಕೃಷ್ಣಾರೆಡ್ಡಿ, ಕಾರ್ಪೋರೇಷನ್ ಬ್ಯಾಂಕ್‌ನ ಮೋಹನ್‌ನಾಯಕ್, ನಗರಸಭೆಯ ಸಮುದಾಯ ಅಧಿಕಾರಿ ಕೆ.ಎಂ.ಸುಧ ಹಾಜರಿದ್ದರು.