ನಗರದಲ್ಲಿ ಬುಧವಾರ ರಾಜ್ಯ ಸರ್ಕಾರ ಮಂಡಿಸಿರುವ 2021-22 ಸಾಲಿನ ಬಜೆಟ್ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ವೀಕ್ಷಕ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ರಾಜ್ಯ ಸರ್ಕಾರ ಮಂಡಿಸಿರುವ 2021-22 ಸಾಲಿನ ಬಜೆಟ್ ನಮ್ಮ ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಪಾಲಿಗೆ ಸಾಕಷ್ಟು ನಿರಾಸೆ ಮೂಡಿಸಿದೆ. ನೀರಿಗಾಗಿ ಪರಿತಪಿಸುತ್ತಿರುವ ಬಯಲು ಸೀಮೆಯ ನಮ್ಮ ಜಿಲ್ಲೆಗೆ ನೀರಿನ ಕುರಿತಾದ ದೂರದೃಷ್ಟಿ ಯೋಜನೆಯನ್ನು ಸರ್ಕಾರ ರೂಪಿಸಬಹುದಾಗಿತ್ತು. ನೈಸರ್ಗಿಕವಾಗಿ ಲಭ್ಯವಿರುವ ನೀರನ್ನು ಸಣ್ಣ ಅಣೆಕಟ್ಟು, ಚೆಕ್ ಡ್ಯಾಂ ನಿರ್ಮಿಸಿ ಶೇಖರಿಸಿಕೊಳ್ಳುವ ಯೋಜನೆಗೆ ಒತ್ತು ನೀಡುವ ಕೆಲಸವನ್ನು ಕೂಡ ಸರ್ಕಾರ ಮಾಡಿಲ್ಲ.
ತೀವ್ರ ನೀರಿನ ಅಭಾವ ಎದುರಿಸುತ್ತಿರುವ ನಮ್ಮ ಜಿಲ್ಲೆಯ ಜನತೆಗೆ ನೀರಿನ ಬವಣೆಯನ್ನು ನೀಗಿಸುವ ಯಾವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ಕೃಷ್ಣಾ ನದಿಯ ನೀರನ್ನು ಬಯಲುಸೀಮೆಯ ಜಿಲ್ಲೆಗಳಿಗೆ ಬಳಸಿಕೊಳ್ಳುವ ಅವಕಾಶವಿದ್ದರೂ ( ಎನ್.ಡಬ್ಲೂ.ಡಿ.ಎ ವರದಿಯ ಅನುಸಾರ) ಈ ನಿಟ್ಟಿನಲ್ಲಿ ಯಾವುದೇ ಚಿಂತನೆಯನ್ನು ಸರ್ಕಾರ ನಡೆಸಿಲ್ಲ ಎಂದು ಅವರು ತಿಳಿಸಿದರು.
ಕೆರೆಗಳಲ್ಲಿ ಹೂಳೆತ್ತುವುದು, ರಾಜಕಾಲುವೆಗಳ ಒತ್ತುವರಿ ತೆರವು ಮಾಡಿ ಅಭಿವೃದ್ಧಿಗೊಳಿಸಬೇಕು, ವಿಫಲವಾಗಿರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೆಜ್ ನೀಡುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡಬಹುದಿತ್ತು ಆದರೆ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆಯುವ ನಮ್ಮ ಶಿಡ್ಲಘಟ್ಟದಲ್ಲಿ “ಸಿಲ್ಕ್ ಕ್ಲಸ್ಟರ್” ಸ್ಥಾಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸಬಹುದಿತ್ತು ಮತ್ತು ಇದರಿಂದ ನಮ್ಮ ರೈತರು ಬೆಳೆಯುವ ರೇಷ್ಮೆಯ ಮಾರುಕಟ್ಟೆಯನ್ನು ಸಹ ವಿಸ್ತರಿಸಬಹುದಿತ್ತು. ರೇಷ್ಮೆ ಹಾಗು ಹಾಲಿಗೆ ಹೆಸರುವಾಸಿಯಾದ ನಮ್ಮ ಜಿಲ್ಲೆಗೆ ಬೇಡಿಕೆಗನುಣವಾಗಿ ಕಾರ್ಖಾನೆಗಳ ಅವಶ್ಯಕತೆ ಕಡೆ ಗಮನ ಹರಿಸಿಲ್ಲವಾದ್ದರಿಂದ ಐದು ರೈತ ವಿರೋಧಿ ಬಜೆಟ್ ಆಗಿದೆ ಎಂದರು.
ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿಯಾಗಿರುವ ಅವಳಿ ಜಿಲ್ಲೆಯಲ್ಲಿ ಸುಸ್ಸಜ್ಜಿತವಾದ ಸಂಯೋಜಿತ ಅಧ್ಯಯನ ಕೇಂದ್ರ ಸ್ಥಾಪಿಸಿ ರೈತರಿಗೆ ಬೆಳೆಗಳ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಿ ರೈತರನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ಮಾಡಬಹುದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಯು ದೇಶ ಹಾಗೂ ವಿದೇಶಗಳಲ್ಲಿ ಬಹಳಷ್ಟು ಬೇಡಿಕೆಯಿದೆ. ದ್ರಾಕ್ಷಿ ರಫ್ತಿಗೆ ಅವಕಾಶ ಕಲ್ಪಸಬಹುದಿತ್ತು. ಸುಮಾರು ಐವತ್ತು ವರ್ಷಗಳಿಂದ ದ್ರಾಕ್ಷಿ ಬೆಳೆಗಳಲ್ಲಿ ಹೆಸರುವಾಸಿಯಾದಂತಹ “ಬೆಂಗಳೂರು ಬ್ಲೂ” ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದಾಗ ಸಂಕಷ್ಟದಲ್ಲಿ ಸಿಲುಕಿರುವ ರೈತರ ಅನುಕೂಲಕ್ಕಾಗಿ ವೈನ್ ಯಾರ್ಡ್ ಕಾರ್ಖಾನೆ ಒತ್ತು ನೀಡಿದ್ದರೆ ರೈತರಿಗೆ ಶಾಶ್ವತ ಅನುಕೂಲ ಕಲ್ಪಿಸಿದಂತಾಗುತ್ತಿತ್ತು ಎಂದು ಹೇಳಿದರು.