Malamachanahalli, sidlaghatta : ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣದ ಗುಣಮಟ್ಟಹೆಚ್ಚಿಸುವ ಜವಾಬ್ದಾರಿಯನ್ನು ಸರ್ಕಾರವು ಶೈಕ್ಷಣಿಕ ದತ್ತು ಕಾರ್ಯಕ್ರಮದ ಮೂಲಕ ನೀಡಿದ್ದು, ಈ ಕಾರ್ಯಕ್ರಮವು ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರ ಸಭೆಯಲ್ಲಿ ಭಾಗವಹಿಸಿ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದು ಅವರು ಮಾತನಾಡಿದರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಎಲ್ಲ ಇಲಾಖೆಗಳ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲ ಹಂತದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಶೈಕ್ಷಣಿಕ ದತ್ತು ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಸೇರಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಪದವಿ-ಪೂರ್ವ ಕಾಲೇಜು ಯಾವದಾದರೂ ಒಂದು ಶಾಲೆಯನ್ನು ದತ್ತು ಪಡೆದು, ನಿರಂತರ ಸಂಪರ್ಕದಲ್ಲಿದ್ದು, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮ ಇದಾಗಿದೆ. ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆಗಳನ್ನು ಒಂದೊಂದು ಇಲಾಖೆಯ ಅಧಿಕಾರಿಗಳಿಗೆ ದತ್ತು ನೀಡಲಾಗಿದೆ ಎಂದರು.
ಮಕ್ಕಳು ಎಸ್ಸೆಸ್ಸೆಲ್ಸಿ ಓದುವ ಸಂದರ್ಭದಲ್ಲಿ ಪೋಷಕರ ಮತ್ತು ಮಕ್ಕಳ ಜೊತೆಗಿನ ಬಾಂಧವ್ಯ ಬಹಳ ಮುಖ್ಯವಾಗಿರುತ್ತದೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರ ಸಂಬಂಧ ಹತ್ತಿರವಾಗಬೇಕು. ಮಕ್ಕಳು ಮೊಬೈಲ್ ಫೋನಿನ ವ್ಯಾಮೋಹಕ್ಕೆ ಬಲಿಯಾಗದಂತೆ ಪೋಷಕರು ಮುಂಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ ಮಕ್ಕಳು ಕೆಟ್ಟ ಚಟಕ್ಕೆ ಬಲಿಯಾದರೆ ಪೋಷಕರೇ ಜವಾಬ್ದಾರಿಯಾಗುತ್ತೀರಾ ಎಂದರು.
ವಿನೂತನವಾಗಿ ನಡೆದ ಪೋಷಕರ ಸಭೆ ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರ ಕಾಲಿಗೆ ನಮಸ್ಕಾರ ಮಾಡಿ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಿಸಿದರು. ಶ್ರದ್ದೆಯಿಂದ ವ್ಯಾಸಂಗ ಮಾಡುವುದಾಗಿ ಪ್ರತಿಜ್ಞೆಯನ್ನು ಸ್ವೀಕಾರ ಮಾಡಿದ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಿ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದಾಗಿ ಮೊಮ್ಮಗ ತಾತನಿಗೆ, ಮಗಳು ತಂದೆಗೆ ವಾಗ್ದಾನ ಮಾಡಿದ್ದು ವಿಶೇಷವಾಗಿತ್ತು,
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸಂಯೋಜಕ ಅಧಿಕಾರಿ ಭಾಸ್ಕರ್ ಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಸದಸ್ಯರು, ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.