ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ ) ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಶಿರಸ್ತೆದಾರ್ ಮಂಜುನಾಥ್ ಮಾತನಾಡಿದರು.
ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನಶೈಲಿಯ ಒಂದು ಭಾಗವಾಗಬೇಕು. ಹವ್ಯಾಸಗಳು ಇತರ ಕೆಲ್ಸಗಳ ಹಾಗಲ್ಲ, ಅವು ಯಾವತ್ತಿಗೂ ಮನಸ್ಸಿಗೆ ಹತ್ತಿರವಾಗುವುದರಿಂದ ನಮಗೆ ಸಂತೋಷವನ್ನೇ ಕೊಡುತ್ತವೆ. ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಸಮಯವನ್ನು ಹವ್ಯಾಸಗಳಿಗೆ ಕೊಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅವು ಒಳ್ಳೆಯ ಪ್ರಭಾವ ಬೀರಿ ಚೈತನ್ಯ ತಂದುಕೊಡುತ್ತವೆ ಎಂದು ಅವರು ತಿಳಿಸಿದರು.
ದುಶ್ಚಟಗಳಿಂದ ದೂರವಿರಿ. ಉತ್ತಮ ಲೇಖಕರ ಪುಸ್ತಕಗಳನ್ನು ಓದುವ, ಅನುಭವಗಳನ್ನು ದಾಖಲಿಸುವ, ಪ್ರವಾಸ, ಛಾಯಾಗ್ರಹಣ, ಚಿತ್ರಕಲೆ, ನೃತ್ಯ, ಡಿಜಿಟಲ್ ಮೂಲಕ ಪ್ರಯೋಗಶೀಲತೆ, ಗಿಡ ಬೆಳೆಸುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ನಮ್ಮ ಶಿಡ್ಲಘಟ್ಟ ತಾಲ್ಲೂಕು 14 ಸ್ಥಾನವನ್ನು ಪಡೆದಿದೆ. ಇದಕ್ಕೆ ಕಾರಣವಾದದ್ದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರೂಪಿಸಿದ ಕಾರ್ಯಕ್ರಮಗಳು ಮತ್ತು ಅದಕ್ಕೆ ತಕ್ಕಂತೆ ಪರಿಶ್ರಮ ಹಾಕಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಂದು ನುಡಿದರು.
ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಕೊರೊನಾ ಸಂದರ್ಭದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಪುರಸ್ಕರಿಸಬೇಕಾದ್ದು ನಮ್ಮ ಕರ್ತವ್ಯ. ಎನ್.ಎಸ್.ಯು.ಐ ವತಿಯಿಂದ ವಿದ್ಯಾರ್ಥಿಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ 50 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ 30 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಡಾಲ್ಫಿನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಶೋಕ್, ಬಿ.ಆರ್.ಸಿ ಯ ಪ್ರಭಾಕರ್, ಭಾಸ್ಕರ್, ಮುನಿಶಾಮಪ್ಪ, ಎನ್.ಎಸ್.ಯು.ಐ ರಾಜ್ಯ ಮುಖಂಡ ಲಿಯಾಕತ್ ಉಲ್ಲಾ, ತಾಲ್ಲೂಕು ಮುಖಂಡರಾದ ಲಕ್ಷ್ಮಿನರಸಿಂಹ, ಪ್ರಸನ್ನ, ರಫೀಕ್ ಹಾಜರಿದ್ದರು.