Sidlaghatta : ಶಿಡ್ಲಘಟ್ಟದ ಊರ ದೇವರೆಂದೇ ಖ್ಯಾತವಾದ ನಗರದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿಯಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ ನಗರದಲ್ಲಿ ಶುಭಕಾರ್ಯಗಳು ಪ್ರಾರಂಭವಾಗುವ ಸಂಪ್ರದಾಯವಿದೆ.
ಶಾಸಕ ವಿ.ಮುನಿಯಪ್ಪ ಮತ್ತು ತಹಶೀಲ್ದಾರ್ ರಾಜೀವ್ ರಥೋತ್ಸವಕ್ಕೆ ಚಾಲನೆ ನೀಡಿದರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆ ಕೋಸಂಬರಿ ಹಂಚಲಾಯಿತು.
‘ಶಿಡ್ಲಘಟ್ಟ ದೇವರು ಹಿಂದು ಮುಂದು’ ಎಂಬ ಪ್ರಸಿದ್ಧ ನಾಣ್ಣುಡಿಗೆ ಕಾರಣ ವೇಣುಗೋಪಾಲಸ್ವಾಮಿ ರಥೋ
ತ್ಸವ. ಹಿಂದೆ ನಗರದ ಅಶೋಕರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ದೇವರ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ಹಿಂದು ಮುಂದಾಗಿ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ ಆ ಮಾತು ಚಾಲ್ತಿಗೆ ಬಂತು.
ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗಿದ್ದು, ತನ್ನ ಆರಾಧ್ಯ ದೈವ ವೇಣುಗೋಪಾಲಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಿದನೆಂಬ ಪ್ರತೀತಿಯಿದೆ. ಕ್ರಿ.ಶ.1526ರಲ್ಲಿ ಶಿಡ್ಲಘಟ್ಟ ಸ್ಥಾಪಿಸಿದ ಅಲಸೂರಮ್ಮ ಕೂಡ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿರುವುದಾಗಿ ಇತಿಹಾಸ ಹೇಳುತ್ತದೆ. ತದನಂತರ ನೂರು ವರ್ಷಗಳ ತರುವಾಯ ಮರಾಠರ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರ ವಾಯಿತೆಂದು ಹೇಳಲಾಗುತ್ತದೆ. ಸುಮಾರು 500 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಿರುವ ವೇಣುಗೋಪಾಲಸ್ವಾಮಿ ಮೂರ್ತಿಯ ಎಡಭಾಗದಲ್ಲಿ ರುಕ್ಮಿಣಿ ಹಾಗೂ ಬಲಭಾಗದಲ್ಲಿ ಸತ್ಯಭಾಮೆಯ ಸುಂದರ ಮೂರ್ತಿಗಳಿವೆ.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ಅರ್ಚಕ ವೈ.ಎನ್. ದಾಶರಥಿಭಟ್ಟಾಚಾರ್ಯ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಸಂಚಾಲಕ ರೂಪಸಿ ರಮೇಶ್, ಬಳೆ ರಘು, ಮಾಜಿ ಶಾಸಕ ಎಂ ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ್ ನಾಯ್ಡು, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಕಾರ್ಮಿಕ ಇಲಾಖೆ ಮಂಜುಳಾ, ನಗರಸಭೆ ಸದಸ್ಯರಾದ ಅನಿಲ್, ಮನೋಹರ್, ಎಸ್, ವೆಂಕಟೇಶ್, ನಿರಂಜನ್, ಗಂಗನಹಳ್ಳಿ ನಾಗರಾಜ್, ಕಂದಾಯ ಇಲಾಖೆ ಮಂಜುನಾಥ್, ಡಿಪೋ ವೇಣು, ರಾಮಾಂಜಿ, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರು, ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು ಹಾಜರಿದ್ದರು.