Cheemangala, Sidlaghatta : ಸುಮಾರು ಎಂಟು ದಶಕಗಳ ಕಾಲ ಸಂತರಾಗಿ ಜಗತ್ತಿನ ಇತರೆ ಸಂತರಿಗೆಲ್ಲಾ ಮಾರ್ಗದರ್ಶಿಯಾಗಿ ಶ್ರೀ ಸಿದ್ಧಗಂಗಾಕ್ಷೇತ್ರಾಧ್ಯಕ್ಷ ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರು ನೀಡಿದ ಕೊಡುಗೆ ಅನನ್ಯ. ಅವರು ಧರ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿ, ಅಧ್ಯಾತ್ಮಿಕತೆಯಂತಹ ಅನೇಕ ವಿಸ್ತಾರ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗೈದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶ್ರೀ ಶಿವಕುಮಾರಸ್ವಾಮೀಜಿ ಭಕ್ತವೃಂದದ ವತಿಯಿಂದ ಹಮ್ಮಿಕೊಂಡಿದ್ದ ದಾಸೋಹದಿನಾಚರಣೆ, ಶ್ರೀ ಶಿವಕುಮಾರಮಹಾಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.
ಶ್ರೀ ಶಿವಕುಮಾರಸ್ವಾಮೀಜಿ ಅವರು ಧಾರ್ಮಿಕ ತತ್ವಗಳನ್ನು ನಿತ್ಯಜೀವನದಲ್ಲಿ ನಿಷ್ಟೆಯಿಂದ ಅನುಷ್ಟಾನಕ್ಕೆ ತಂದ ಪರಿಪೂರ್ಣಮೂರ್ತಿಯಾಗಿ ಅತಿಮಾನವರೆನಿಸಿಕೊಂಡಿದ್ದಾರೆ. ಅವರು ಈ ಶತಮಾನಕಂಡ ಅಸಾಧಾರಣ ಸಾಮರ್ಥ್ಯದ ವ್ಯಕ್ತಿತ್ವವುಳ್ಳವರಾಗಿದ್ದರು. ಕಳೆದ ಮುಕ್ಕಾಲು ಶತಮಾನಗಳಷ್ಟು ಕಾಲ ಜನನಾಯಕರು, ಕೃಷಿಕ, ಉದ್ಯಮಿ, ವೇದಾಂತಿ, ಅಧಿಕಾರಿಗಳೆಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಬಲ್ಲವರಾಗಿದ್ದರು ಎಂದರು.
ಸಾಕಾರಮೂರ್ತಿ: ಸ್ವಾಮೀಜಿ ಅವರು ನಿಷ್ಟೆ, ಸೇವಾಕಾಂಕ್ಷೆ, ದೃಢನಿಶ್ಚಯ, ಒದಗಬಹುದಾದ ಅಡಚಣೆಗಳನ್ನು ಸಮರ್ಥವಾಗಿ ಎದುರಿಸಬಲ್ಲ ಧೈರ್ಯ, ಜೀವನ ಪಾವಿತ್ರತೆ, ವೈಶಾಲ್ಯ ಮನೋದೋರಣೆ, ಶುದ್ಧ ಅಂತಃಕರಣ, ಸತ್ಯಪ್ರೇಮ, ಕಾರುಣ್ಯ, ಎಲ್ಲಾ ಸದ್ಗುಣಗಳೂ ಮೈಗೂಡಿಸಿಕೊಂಡ ಸಾಕಾರಮೂರ್ತಿಯಾಗಿದ್ದರಿಂದ ಶ್ರೀ ಶಿವಕುಮಾರಸ್ವಾಮೀಜಿ ನಡೆದಾಡುವ ದೇವರೆನಿಸಿಕೊಂಡರು ಎಂದರು.
ಗ್ರಾಮದ ಹಿರಿಯ ದಾನಿ, ಕಂದಾಯ ಇಲಾಖೆಯ ನಿವೃತ್ತನೌಕರ ಪರಮಶಿವಯ್ಯ ಮಾತನಾಡಿ, ಶ್ರೀಗಳದ್ದು ಅಧಿಕಾರದಾಹ, ಒಡ್ಡೋಲಗ, ಅಟ್ಟಹಾಸ, ಆಡಂಬರದ ಲಾಂಚನಗಳಿಗೆ ಮನಕೊಡದೇ ನಿರಪೇಕ್ಷ ಮತ್ತು ನಿಸ್ವಾರ್ಥವಾಗಿ ಸಮಾಜಸೇವೆಯನ್ನೇ ಗುರಿಯಾಗಿರಿಸಿಕೊಳ್ಳುವ ಗುಣವಾಗಿದ್ದಿತು ಎಂದರು.
ನಿವೃತ್ತ ಸಾರ್ವಜನಿಕಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್‌ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ದೃಢಸಂಕಲ್ಪ, ಆತ್ಮವಿಶ್ವಾಸ ಹೆಚ್ಚಬೇಕು. ಕಲಿಕೆಯಲ್ಲಿನ ಪರಿಶ್ರಮವು ಉತ್ತಮಭವಿಷ್ಯವನ್ನು ರೂಪಿಸಿಕೊಡುತ್ತದೆ. ಮಕ್ಕಳಲ್ಲಿ ಮಾನವೀಯ, ನೈತಿಕ ಮೌಲ್ಯಗಳು ವೃದ್ಧಿಯಾಗಬೇಕು ಎಂದರು.
ನಿವೃತ್ತಶಿಕ್ಷಕ ಸೋಮಶೇಖರ್ ಮಾತನಾಡಿ, ಶ್ರೀ ಸಿದ್ಧಗಂಗಾಕ್ಷೇತ್ರವು ಸರ್ಕಾರದ ಸಹಾಯಹಸ್ತವನ್ನೇ ನಂಬದೇ ತನ್ನ ಸ್ವತಂತ್ರ ಸ್ವಂತದ್ದಾದ ಪರಿಶ್ರಮದಿಂದ ಕೋಟ್ಯಾಂತರ ಮಂದಿಯ ಪಾಲಿಗೆ ತ್ರಿವಿಧ ದಾಸೋಹಿಯಾಗಿ ಸಲ್ಲಿಸಿದ ಸೇವೆಯನ್ನು ಸಮಾಜವು ಪೂಜನೀಯ ಭಾವನೆಯಿಂದ ಸ್ಮರಿಸುತ್ತಿದೆ. ವಿದ್ಯಾರ್ಥಿಗಳು ಗುರುಹಿರಿಯರಲ್ಲಿ ಗೌರವಾದರ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ದಾಸೋಹದಿನಾಚರಣೆ ಅಂಗವಾಗಿ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಶ್ರೀ ಶಿವಕುಮಾರಸ್ವಾಮೀಜಿ ಭಾವಚಿತ್ರಕ್ಕೆ ವಿಶೇಷಪೂಜೆ ಸಲ್ಲಿಸಲಾಯಿತು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಮುಖ್ಯಶಿಕ್ಷಕ ಶಿವಶಂಕರ್, ಹಿರಿಯ ಹರಿಕತೆವಿದ್ವಾಂಸ ಜ್ಞಾನಮೂರ್ತಿ ಮಾತನಾಡಿದರು. ಪದ್ಮಜಾ, ಉತ್ತಮ್, ಉಮೇಶ್, ಶಿಕ್ಷಕ ಎಂ.ಶಿವಕುಮಾರ್, ಶ್ರೀನಿವಾಸ್, ನವೀನ್, ಕವಿತಾ, ಗೌತಮ್, ಶಂಕರ್, ಹಾಜರಿದ್ದರು.